ವಿಜಯನಗರ: ಮನೆ ಹತ್ತಿರ ನಿಂತಿದ್ದ ಚರಂಡಿ ನೀರಿಗೆ ಬಿದ್ದು 4 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಹೊಸಪೇಟೆ ನಗರದ ಅನಂತಶಯನ ಗುಡಿ ಬಡಾವಣೆಯಲ್ಲಿ ನಡೆದಿದೆ. ವಿರಾಟ್.ಜೆ (4) ಮೃತ ಬಾಲಕ. ಬಾಲಕನ ಮನೆ ಹತ್ತಿರದ ಖಾಲಿ ಜಾಗದಲ್ಲಿ ಚರಂಡಿ ನೀರು ನಿಂತಿತ್ತು. ಆಟವಾಡಲು ಹೋದ ಸಂದರ್ಭ ನೀರು ನಿಂತಿರುವುದನ್ನು ಗಮನಿಸದೇ ಬಾಲಕ ನೀರು ತುಂಬಿದ್ದ ಗುಂಡಿಗೆ ಬಿದ್ದಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಬಾಲಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಇನ್ನೂ ಘಟನೆ ಸಂಬಂಧ ಸಿಡಿದೆದ್ದ ನಗರಸಭೆ ಸದಸ್ಯರು, ವಿವಿಧ ಸಂಘಟನೆಗಳುಹೊಸಪೇಟೆ ನಗರಸಭೆ ಕಚೇರಿ ಎದುರು ಟೆಂಟ್ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಧರಣಿಯಲ್ಲಿ ಸಾವನ್ನಪ್ಪಿದ ಮಗು ವಿರಾಟ್ ತಂದೆ ಮರ್ಚಿತ್ ತಾಯಿ ಹರ್ಷಿತಾ ಸೇರಿ ಕುಟುಂಬಸ್ಥರು ಜೊತೆಗೆ ಹೊಸಪೇಟೆ ನಗರಸಭೆ 35 ಸದಸ್ಯರು ಭಾಗಿಯಾಗಿದ್ದು,
ವಿರಾಟ್ ಸಾವನ್ನಪ್ಪುವುದಕ್ಕೂ ಮುಂಚೆ 15 ದಿನಗಳ ಹಿಂದೆ ವಾರ್ಡ್ ಸದಸ್ಯೆ ಪೌರಾಯುಕ್ತ ಚಂದ್ರಪ್ಪ ಗಮನಕ್ಕೆ ತಂದ್ರೂ ಚರಂಡಿ ಗುಂಡಿಮುಚ್ಚದೇ ನಿರ್ಲಕ್ಷ ವಹಿಸಿದ್ದಾರೆ. ಕೂಡಲೇ ಹೊಸಪೇಟೆ ನಗರಸಭೆ ಪೌರಾಯುಕ್ತ ಚಂದ್ರಪ್ಪರನ್ನ ಅಮಾನತು ಮಾಡುವಂತೆ ಆಗ್ರಹಿಸಿದ್ದು, ಪ್ರತಿಭಟನಾನಿರತ ನಗರಸಭೆ ಸದಸ್ಯರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಬೇಕೆಂದು ಪಟ್ಟು ಹಿಡಿದ್ದಾರೆ.