ಬೆಂಗಳೂರು:- ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದರೂ ಇದುವರೆಗೂ ಒಂದೇ ಒಂದು FIR ದಾಖಲಾಗಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಘಟನೆಯನ್ನು ಕೇವಲ ‘ಅಸಹಜ ಸಾವು ಎಂದು ಪರಿಗಣಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಹನ್ನೊಂದು ಯುಡಿಆರ್ ದಾಖಲಾಗಿವೆ. ದುರ್ಘಟನೆಯಿಂದ ಆಗಿರುವ ಸಾವು ಹಾಗೂ ಇತರ ಯಾವುದೇ ವಿಚಾರಕ್ಕೆ ಕೇಸ್ ದಾಖಲು ಮಾಡಿಲ್ಲ.
ಕಾರ್ಯಕ್ರಮ ಆಯೋಜಿಸಿದವರ ಅಜಾಗರೂಕತೆಯಿಂದ ದುರ್ಘಟನೆ ಸಂಭವಿಸಿದೆ ಎಂದು ಕೇಸ್ ದಾಖಲು ಮಾಡಲು ಅವಕಾಶವಿತ್ತು. ಕಾರ್ಯಕ್ರಮ ಆಯೋಜಿಸಿದ್ದ ಕೆಎಸ್ಸಿಎ ಮತ್ತು ಕಾರ್ಯಕ್ರಮದ ಇವೆಂಟ್ ಮ್ಯಾನೇಜ್ಮೆಂಟ್ ಜವಾಬ್ದಾರಿ ವಹಿಸಿದ್ದ ಡಿಎನ್ಎ ಕಂಪನಿ ವಿರುದ್ಧ ಕೇಸ್ ದಾಖಲು ಮಾಡಿ ತನಿಖೆ ನಡೆಸಬಹುದಾಗಿತ್ತು. ಆದರೆ, ಈಗ ಹೊಣೆಗಾರಿಕೆ ಹೊರಲು ಯಾರೂ ತಯಾರಿಲ್ಲ ಎಂಬುದು ಬೆಳಕಿಗೆ ಬಂದಿದೆ.
ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಕಬ್ಬನ್ ಪಾರ್ಕ್ ಪೊಲೀಸರು ‘ಅಸಹಜ ಸಾವು’ ಪ್ರಕರಣ ದಾಖಲಿಸಿದ್ದಾರೆ ಎಂಬುದು ಗೊತ್ತಾಗಿದೆ. ಪೊಲೀಸರ ಈ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಾಗಾದರೆ, ಹನ್ನೊಂದು ಜೀವಗಳಿಗೆ ಬೆಲೆ ಇಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.









