ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಉಂಟಾದ ಕಾಲ್ತುಳಿತದಿಂದಾಗಿ ಆರ್‌ಸಿಬಿ ತಂಡದ ವಿಜಯೋತ್ಸವಕ್ಕೆ ಸೂತಕದ ಛಾಯೆ ಎದುರಾಗಿದೆ. ಒಂದೆಡೆ ವಿರಾಟ್ ಕೊಹ್ಲಿ , ರಜತ್ ಪಾಟಿದಾರ್ ಸೇರಿದಂತೆ ಇಡೀ ಆರ್‌ಸಿಬಿ ತಂಡ ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ಐಪಿಎಲ್ ಟ್ರೋಫಿಯನ್ನು ಎತ್ತಿ ಸಂಭ್ರಮಿಸುತ್ತಿದ್ದರೆ, ಮತ್ತೊಂದೆಡೆ, ಕ್ರೀಡಾಂಗಣದ ಹೊರಗೆ 11 ಆರ್‌ಸಿಬಿ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ.
ಈ ಅವಘಡದಲ್ಲಿ ಸಾವಿಗೀಡದವರ ಕುಟುಂಬಗಳಿಗೆ 10 ಲಕ್ಷ ರೂ ಪರಿಹಾರ ಘೋಷಿಸಲಾಗಿತ್ತು. ಹಾಗೆಯೇ ಗಾಯಾಳುಗಳಿಗೂ ಉಚಿತ ಚಿಕಿತ್ಸೆ ನೀಡುವುದಾಗಿ ಹೇಳಿಕೊಂಡಿತ್ತು. ಸರ್ಕಾರದ ಬಳಿಕ ಕೆಎಸ್ಸಿಎ ಕೂಡ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ಧನವಾಗಿ 5 ಲಕ್ಷ ನೀಡುವುದಾಗಿ ಹೇಳಿತ್ತು.
ಇದೀಗ ಆರ್‌ಸಿಬಿ ಫ್ರಾಂಚೈಸಿ ಕೂಡ ಮಡಿದ ಆರ್‌ಸಿಬಿ ಅಭಿಮಾನಿಗಳ ಕುಟುಂಬಗಳ ನೆರವಿಗೆ ಮುಂದಾಗಿದೆ.ಅಲ್ಲದೆ ಈ ಅವಘಡದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಅಭಿಮಾನಿಗಳ ಚಿಕಿತ್ಸೆಗಾಗಿ ಆರ್‌ಸಿಬಿ ಕೇರ್ ನಿಧಿಯನ್ನು ಸಹ ರಚನೆ ಮಾಡಲಾಗಿದೆ.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಕ್ರೀಡಾಂಗಣದ ಹೊರಗೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಈ ಸಂದರ್ಭದಲ್ಲಿ, ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರಯತ್ನಿಸುವಾಗ ಕಾಲ್ತುಳಿತ ಸಂಭವಿಸಿತು, ಇದರಲ್ಲಿ 11 ಅಭಿಮಾನಿಗಳು ಪ್ರಾಣ ಕಳೆದುಕೊಂಡರೆ, 20 ಕ್ಕೂ ಹೆಚ್ಚು ಅಭಿಮಾನಿಗಳು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.