ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಟಿಕೆಟ್‌ಗಳ ಬ್ಲಾಕ್ ಮಾರ್ಕೆಟ್ ಮಾರಾಟದ ಬೃಹತ್ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ.
ಕೆಎಸ್‌ಸಿಎ ಸದಸ್ಯರೊಬ್ಬರು ಹಾಗೂ ಹೋಟೆಲ್ ಕ್ಯಾಪ್ಟನ್ ಸೇರಿ ಈ ಅಕ್ರಮ ದಂಧೆ ನಡೆಸುತ್ತಿದ್ದರೆಂಬುದು ವಿಚಾರಣೆಯಲ್ಲಿ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಸಿಸಿಬಿ ಡಿಸಿಪಿ ಶ್ರೀಹರಿಬಾಬು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಲಕ್ಷ್ಮೀ ಕ್ಯಾಟರ್ಸ್ ಹೋಟೆಲ್‌ನ ಕ್ಯಾಪ್ಟನ್ ಚಂದ್ರಶೇಖರ್ ಬಂಧಿತನಾಗಿದ್ದಾನೆ. ಈತ ₹15,000 ಮೌಲ್ಯದ ಟಿಕೆಟ್‌ಗಳನ್ನು ₹19,000ಕ್ಕೆ ಬ್ಲಾಕ್‌ನಲ್ಲಿ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಲಾಗಿದೆ.
ವಿಚಾರಣೆ ವೇಳೆ ನೀಡಿದ ಮಾಹಿತಿಯ ಆಧಾರದಲ್ಲಿ ಕೆಎಸ್‌ಸಿಎ ಸದಸ್ಯ ಗಣೇಶ್ ಹರಿಕೇಶ್ ಈ ದಂಧೆಯ ಪ್ರಮುಖ ಪಾತ್ರಧಾರಿ ಎಂಬುದು ಬೆಳಕಿಗೆ ಬಂದಿದೆ. ಈತ ಎರಡು ಖಾಸಗಿ ಕಂಪನಿಗಳ ಹೆಸರಿನಲ್ಲಿ ಆನ್‌ಲೈನ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್‌ಗಳನ್ನು ಖರೀದಿಸಿ, ನಂತರ ಅವುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ.
ಆರ್‌ಸಿಬಿಯ ಮೊದಲ ಪಂದ್ಯದಲ್ಲಿ 81 ಟಿಕೆಟ್‌ಗಳು ಹಾಗೂ ನಂತರದ ಪಂದ್ಯಕ್ಕೆ 100 ಟಿಕೆಟ್‌ಗಳನ್ನು ಸೇರಿಸಿ ಒಟ್ಟಾರೆ 181 ಟಿಕೆಟ್‌ಗಳ ಅಕ್ರಮ ವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ಸುಮಾರು ₹17 ಲಕ್ಷಕ್ಕೂ ಅಧಿಕ ಮೌಲ್ಯದ ವ್ಯವಹಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧನದ ಬಳಿಕ ಚಂದ್ರಶೇಖರ್ ನೀಡಿದ ಮಾಹಿತಿಯಂತೆ ಗಣೇಶ್ ಹರಿಕೇಶ್ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಟಿಕೆಟ್ ಪೂರೈಕೆ ಮಾಡಿದ ಖಾಸಗಿ ಕಂಪನಿಗಳಿಗೆ ನೋಟಿಸ್ ನೀಡುವ ಸಿದ್ಧತೆಯೂ ನಡೆಯುತ್ತಿದೆ.



