ಚಿತ್ರದುರ್ಗ: ಚಿತ್ರದುರ್ಗದ ಬಳಿ ಸಂಭವಿಸಿದ ಭೀಕರ ಬಸ್ ಅಪಘಾತವು ಬೆಂಗಳೂರಿನ ಮಾವಳ್ಳಿ ನಿವಾಸದ ಕುಟುಂಬ ಹಾಗೂ ಸಹೋದರರ ಸಮೂಹದ ಬದುಕನ್ನು ಅಸ್ತವ್ಯಸ್ತಗೊಳಿಸಿದೆ. ತಂಡದಲ್ಲಿದ್ದ ಕವಿತಾ ಎಂಬ ಯುವತಿಯ ಮದುವೆ ನಿಗದಿಯ ಹಿನ್ನೆಲೆಯಲ್ಲಿ, ಬ್ಯಾಚುಲರ್ ಪಾರ್ಟಿ ಹಾಗೂ ಕ್ರಿಸ್‌ಮಸ್ ರಜೆಯ ಪ್ರಯುಕ್ತ ಗೋಕರ್ಣ ಪ್ರವಾಸಕ್ಕೆ ಹೊರಟ ಏಳು ಜನರ ತಂಡ ಅಪಘಾತಕ್ಕೆ ಸಿಲುಕಿದ್ದು, ಇಬ್ಬರು ಮೃತರಾಗಿದ್ದಾರೆ.
27 ವರ್ಷದ ಬಿಂದು ಹಾಗೂ ಆಕೆಯ 3 ವರ್ಷದ ಮಗಳು ಗ್ರೀಯಾ ಇನ್ನೂ ನಾಪತ್ತೆಯಾಗಿದ್ದಾರೆ. ತಾಯಿ–ಮಗು ನಾಪತ್ತೆ ಸುದ್ದಿಯು ಕುಟುಂಬಸ್ಥರಿಗೆ ಆಘಾತ ತಂದಿದೆ. ಬೆಂಗಳೂರಿನ ಮಾವಳ್ಳಿ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಈ ತಂಡದಲ್ಲಿ ಮಂಜುನಾಥ್, ಕವಿತಾ, ದಿಲೀಪ್, ಸಂಧ್ಯಾ, ಶಶಾಂಕ್, ಬಿಂದು ಮತ್ತು ಪುಟ್ಟ ಮಗು ಗ್ರೀಯಾ ಸೇರಿದ್ದರು. ಇವರಲ್ಲಿ ಹೆಚ್ಚಿನವರು ಐಟಿ ಉದ್ಯೋಗಿಗಳಾಗಿದ್ದು, ಸಹೋದ್ಯೋಗಿಗಳಾಗಿ ಈ ಪ್ರವಾಸವನ್ನು ಯೋಜಿಸಿದ್ದರು.
ಮಾವಳ್ಳಿಯಿಂದ ಮೂರು ದಿನಗಳ ಗೋಕರ್ಣ ಟ್ರಿಪ್‌ಗಾಗಿ ಹೊರಟ ಈ ತಂಡ ಮಧ್ಯರಾತ್ರಿ ಚಿತ್ರದುರ್ಗದ ಬಳಿ ಭೀಕರ ಬಸ್ ಅಪಘಾತಕ್ಕೆ ಸಿಲುಕಿತು. ಅಪಘಾತದಲ್ಲಿ ಮಂಜುನಾಥ್ ಗೆ ಗಂಭೀರ ಗಾಯಗಳು ದಾಖಲಾಗಿದ್ದು, ಸೊಂಟದ ಕೆಳಭಾಗ ಮತ್ತು ಎಡ ಕಾಲಿಗೆ ಸುಟ್ಟ ಗಾಯಗಳಾಗಿವೆ. ಅವರನ್ನು ತಕ್ಷಣವೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಮುಂದಿನ 24 ಗಂಟೆಗಳ ಅವಧಿಯಲ್ಲಿ ತೀವ್ರ ನಿಗಾವಿನ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಶಶಾಂಕ್ ಹಾಗೂ ಸಂಧ್ಯಾ ಗಂಭೀರ ಗಾಯಗಳೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದವರಿಗೆ ಸಣ್ಣ ಗಾಯಗಳಾಗಿದ್ದು, ತಕ್ಷಣ ಚಿಕಿತ್ಸೆ ನೀಡಲಾಗಿದೆ. ಆದರೆ ಅತ್ಯಂತ ನೋವಿನ ಸಂಗತಿ ಎಂದರೆ, ಬಿಂದು ಹಾಗೂ ಆಕೆಯ 3 ವರ್ಷದ ಮಗು ಗ್ರೀಯಾ ಕುರಿತು ಯಾವುದೇ ಮಾಹಿತಿ ಇಲ್ಲದೇ ಇರುವುದು. ಕುಟುಂಬಸ್ಥರು, ಅಪಘಾತ ಸ್ಥಳ ಮತ್ತು ಆಸ್ಪತ್ರೆಗಳಲ್ಲಿ ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದಾರೆ.



