ಚಿಕ್ಕಮಗಳೂರು: ನಕ್ಸಲರಿಂದ ನಾಗರಿಕರು, ಪೊಲೀಸರು, ಸೈನಿಕರು ಪ್ರಾಣತ್ಯಾಗ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಕ್ಸಲರ ಬಳಕೆ ಶಸ್ತ್ರಾಸ್ತ್ರ ಪತ್ತೆ ಕುರಿತು ಪ್ರತಿಕ್ರಿಯಿಸಿದ ಅವರು, ನಕ್ಸಲರು ಎಲ್ಲಿ ಕಾರ್ಯಾಚರಣೆ ಮಾಡಿದ್ದರು? ಹಣ, ಶಸ್ತ್ರಾಸ್ತ್ರ ಎಲ್ಲಿಂದ ಬಂತು? ಯಾವ ವ್ಯಕ್ತಿ, ಸಂಘಟನೆ ಸಹಾಯ ಮಾಡಿದ್ದಾರೆ? ಎಲ್ಲಾ ಮಾಹಿತಿ ಹಂಚಿಕೊಂಡರೆ ಶರಣಾಗತಿಗೆ ಅರ್ಥ ಬರುತ್ತದೆ ಎಂದರು.
ಇನ್ನೂ ನಕ್ಸಲ್ ಸಿದ್ಧಾಂತ ಸಂವಿಧಾನಕ್ಕೆ ವಿರುದ್ಧವಾದ ಸಿದ್ಧಾಂತ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ಸಿದ್ಧಾಂತ. ಅವರಿಗೆ ಬ್ಯಾಲೆಟ್ ಮೇಲೆ ನಂಬಿಕೆ ಇಲ್ಲ, ಬುಲೆಟ್ ಮೇಲೆ ನಂಬಿಕೆ ಇದೆ. ನಕ್ಸಲರಿಂದ ನಾಗರಿಕರು, ಪೊಲೀಸರು, ಸೈನಿಕರು ಪ್ರಾಣತ್ಯಾಗ ಮಾಡಿದ್ದಾರೆ. ಈ ಹಿನ್ನೆಲೆ ಪ್ಯಾಕೇಜ್ ನೀಡುವ ಮುನ್ನ ಎಲ್ಲಾ ಮಾಹಿತಿ ಕಲೆ ಹಾಕಬೇಕು. ನಕ್ಸಲ್ ಶರಣಾಗತಿ ಒಂದು ತಂತ್ರಗಾರಿಕೆ ಆಗಬಾರದು ಎಂದು ಆಗ್ರಹಿಸಿದರು.
ನಕ್ಸಲರು ತಂತ್ರಗಾರಿಕೆ ಕಾರಣಕ್ಕೆ ಶರಣಾಗಿದ್ದಾರೋ ಅಥವಾ ನಕ್ಸಲ್ ಸಿದ್ಧಾಂತದಿಂದ ಹೊರಬಂದು ಶರಣಾಗಿದ್ದಾರೋ ಎಂಬುದನ್ನು ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು. ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ. ನಕ್ಸಲರ ಶರಣಾಗತಿ ಹೆಸರಿನಲ್ಲಿ ಕಾರ್ಯಚಟುವಟಿಕೆ ಬಲಗೊಳಿಸಲು ಅವಕಾಶ ನೀಡಿದಂತೆ ಆಗಬಾರದು. ಅವರ ಚಲನವಲನಗಳ ಮೇಲೆ ನಿಗಾ ಇಡುವುದರ ಜೊತೆಗೆ ಅವರು ತನಿಖೆಗೆ ಸಹಕರಿಸಬೇಕು ಎಂದರು.