ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಸರ್ಕಾರಿ ಶಾಲೆಯ ವಸತಿನಿಲಯದಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹಸುಗೂಸಿಗೆ ಜನ್ಮ ನೀಡಿದ ಘಟನೆ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ದಿಢೀರ್ ಹೊಟ್ಟೆನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ವಸತಿನಿಲಯದ ಸಿಬ್ಬಂದಿ ತಕ್ಷಣವೇ ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ವೇಳೆ ಆಕೆ ಗಂಡು ಮಗುವಿಗೆ ಜನ್ಮ ನೀಡಿರುವುದು ಬೆಳಕಿಗೆ ಬಂದಿದೆ. ಮಾಹಿತಿ ತಿಳಿದ ತಕ್ಷಣ ಜಿಲ್ಲಾಡಳಿತ ಚುರುಕುಗೊಂಡಿದ್ದು, ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಆಸ್ಪತ್ರೆಗೆ ತೆರಳಿ ಬಾಲಕಿಯ ಮತ್ತು ಶಿಶುವಿನ ಆರೋಗ್ಯ ವಿಚಾರಿಸಿದರು. ಇತ್ತ ಕುಕನೂರು ಪೊಲೀಸರು ವೇಗವಾಗಿ ಕಾರ್ಯಾಚರಣೆ ನಡೆಸಿ,
ಅಪ್ರಾಪ್ತೆಯ ಈ ಸ್ಥಿತಿಗೆ ಕಾರಣನಾದ ಯುವಕನನ್ನು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಬಾಲಕಿ 9 ತಿಂಗಳು ಗರ್ಭಿಣಿಯಾಗಿದ್ದರೂ ಅಲ್ಲಿನ ವಾರ್ಡನ್ ಅಥವಾ ಸಿಬ್ಬಂದಿಯ ಗಮನಕ್ಕೆ ಬಾರದೇ ಹೋಗಿದ್ದು ಹೇಗೆ ಎಂದು ಪಾಲಕರು ಮತ್ತು ಗ್ರಾಮಸ್ಥರು ಕಂಗಲಾಗಿದ್ದಾರೆ.


