HomeAgricultureಅನಧಿಕೃತ ಪಂಪ್‌ಸೆಟ್‌ಗಳ ತೆರವು

ಅನಧಿಕೃತ ಪಂಪ್‌ಸೆಟ್‌ಗಳ ತೆರವು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಜಿಲ್ಲಾಧಿಕಾರಿಗಳ ಖಡಕ್ ಸೂಚನೆಯ ಹಿನ್ನಲೆಯಲ್ಲಿ ಗುರುವಾರ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಉಮೇಶ ಹಡಪದ ನೇತೃತ್ವದಲ್ಲಿ ತುಂಗಭದ್ರಾ ನದಿ ಪಾತ್ರದಲ್ಲಿ ಅನಧಿಕೃತವಾಗಿ ನೀರೆತ್ತುವ ರೈತರ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆ ನಡೆಸಲಾಯಿತು.

ಪಟ್ಟಣದಲ್ಲಿ ಬುಧವಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದ ವೇಳೆ, ಪಟ್ಟಣಕ್ಕೆ ಕಳೆದ ಒಂದು ತಿಂಗಳಿನಿಂದ ನದಿ ನೀರು ಸರಬರಾಜು ನಿಂತಿದೆ. ನದಿ ನೀರು ಸಂಗ್ರಹವಾಗುವ ಜಾಕ್‌ವೆಲ್‌ನಿಂದಲೇ ರೈತರು ಹಗಲೂ-ರಾತ್ರಿ ಪಂಪ್‌ಸೆಟ್‌ಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ನೀರೆತ್ತಿದ್ದಾರೆ.

ಅಲ್ಲದೇ ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿ ನೀರು ಸಂಗ್ರಹವಾಗುವ ವ್ಯವಸ್ಥೆಯೂ ಇಲ್ಲ. ಸಾರ್ವಜನಿಕರು ನೀರಿಗಾಗಿ ಪರಿತಪಿಸುವಂತಾಗಿದೆ ಎಂದು ಪತ್ರಕರ್ತರು ನೀರಿನ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳಿಗೆ ಎಳೆಎಳೆಯಾಗಿ ಬಿಡಿಸಿಟ್ಟರು.

ಪರಿಸ್ಥಿತಿಯ ಗಂಭೀರತೆಯನ್ನರಿತ ಜಿಲ್ಲಾಧಿಕಾರಿಗಳು ಕೂಡಲೇ ತಹಸೀಲ್ದಾರ, ಪುರಸಭೆ, ತಾಲೂಕಾ ಪಂಚಾಯತಿ, ಹೆಸ್ಕಾಂ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅಲ್ಲಿರುವ ರೈತರ ಪಂಪ್‌ಸೆಟ್ ತೆರವುಗೊಳಿಸುವಂತೆ ಮತ್ತು ನೀರು ಸಂಗ್ರಹವಾಗುವ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು.

ಈ ಕುರಿತು ಮುಖ್ಯಾಧಿಕಾರಿ ಮಹೇಶ ಹಡಪದ ಪ್ರತಿಕ್ರಿಯಿಸಿ, ಜಿಲ್ಲಾಧಿಕಾರಿಗಳ ಸೂಚನೆಯಂತೆ ತುಂಗಭದ್ರಾ ನದಿ ಪಾತ್ರದಲ್ಲಿನ ನಮ್ಮ ಜಾಕ್‌ವೆಲ್‌ಗೆ ನೀರು ಹರಿದು ಬರುವ ಮಾರ್ಗದಲ್ಲಿಯೇ ಅಳವಡಿಸಿದ್ದ ೧೫-೨೦ ಪಂಪ್‌ಸೆಟ್‌ಗಳನ್ನು ರೈತರಿಗೆ ತಿಳಿವಳಿಕೆ ಹೇಳುವ ಮೂಲಕ ತೆರವುಗೊಳಿಸಿದ್ದೇವೆ. ಸದ್ಯಕ್ಕೆ ಪಂಪ್‌ಸೆಟ್ ಅಳವಡಿಸದಂತೆ ನಿಗಾವಹಿಸಲು ಗುತ್ತಲ ಪೊಲೀಸ್ ಠಾಣಾಧಿಕಾರಿಗಳಿಗೆ ಮಾಹಿತಿ ನೀಡಿ ಸಹಕಾರ ಕೋರಲಾಗಿದೆ.

ಭದ್ರಾ ಜಲಾಶಯದಿಂದ ಬಿಟ್ಟಿರುವ ನೀರು ೨ ದಿನಗಳಲ್ಲಿ ನಮ್ಮ ಭಾಗಕ್ಕೆ ತಲುಪಲಿದೆ. ನದಿಗೆ ಅಡ್ಡಲಾಗಿ ಮರಳಿನ ಚೀಲ ಅಳವಡಿಸುವುದು, ನೀರಿನ ಮಾರ್ಗ ಬದಲಾಗದಂತೆ ನೋಡಿಕೊಳ್ಳುವ ಮೂಲಕ ತಾತ್ಕಾಲಿಕವಾಗಿ ನದಿ ನೀರು ಸಂಗ್ರಹಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಒಂದು ವಾರದಲ್ಲಿ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಗುರುವಾರ ಬೆಳಿಗ್ಗೆಯೇ ನದಿಗೆ ತೆರಳಿದಾಗ ಪಟ್ಟಣಕ್ಕೆ ನೀರು ಸಂಗ್ರಹವಾಗುವ ಜಾಕ್‌ವೆಲ್ ಮತ್ತು ಅಕ್ಕಪಕ್ಕವೇ ನೂರಾರು ಪಂಪ್‌ಸೆಟ್‌ಗಳನ್ನು ನೋಡಿ ನೌಕರರು, ಸಿಬ್ಬಂದಿ ವರ್ಗ, ಪೌರಕಾರ್ಮಿಕರೊಂದಿಗೆ ತೆರಳಿ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿದ್ದಾರೆ.

ಈ ವೇಳೆ ಆಕ್ಷೇಪವೆತ್ತಿದ ರೈತರಿಗೆ ಪಟ್ಟಣ ಸೇರಿ ಗ್ರಾಮೀಣ ಭಾಗದ ಜನರು ನೀರಿಲ್ಲದೇ ಪರಿತಪಿಸುತ್ತಿದ್ದಾರೆ. ಸದ್ಯಕ್ಕೆ ನೀರಾವರಿಗೆ ನೀರು ಬಳಸುವುದು ಬೇಡ. ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳ ಆದೇಶವಿದೆ ಎಂದು ತಿಳಿ ಹೇಳಿದರು. ಬಳಿಕ ಜಾಕ್‌ವೆಲ್‌ನಲ್ಲಿ ಸಂಗ್ರಹವಾಗಿದ್ದ ಕೆಸರು, ತ್ಯಾಜ್ಯ ಸ್ವಚ್ಛಗೊಳಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!