ಹೈದರಾಬಾದ್:- ಚಂದ್ರಬಾಬು ನಾಯ್ಡು `ಮಹಾ ಸುಳ್ಳುಗಾರ’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಜಗನ್ ಮೋಹನ್ ರೆಡ್ಡಿ ಕಿಡಿಕಾರಿದ್ದಾರೆ.
ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಹಾಲಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರನ್ನು `ಮಹಾ ಸುಳ್ಳುಗಾರ’ ಎಂದು ಕರೆದಿದ್ದಾರೆ. ಕೇವಲ ರಾಜಕೀಯ ಉದ್ದೇಶಗಳಿಗಾಗಿ ಕೋಟಿಗಟ್ಟಲೆ ಜನರ ನಂಬಿಕೆಗಳನ್ನು ಅವರು ಘಾಸಿಗೊಳಿಸಿದ್ದಾರೆ. ಸುಳ್ಳುಗಳನ್ನು ಹರಡುವ ಅವರ ನಾಚಿಕೆಯಿಲ್ಲದ ಕೃತ್ಯಕ್ಕಾಗಿ ಅವರು ತೀವ್ರ ರೀತಿಯಲ್ಲಿ ವಾಗ್ದಂಡನೆಗೆ ಒಳಗಾಗುವುದು ಅತ್ಯಗತ್ಯ. ಇದಕ್ಕಾಗಿ ದೇಶದ ಜನ ಪ್ರಧಾನಿಗಳ ಕಡೆ ನೋಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ನಾಯ್ಡು ಅವರು ತಿರುಪತಿ ದೇವಸ್ಥಾನದ ಪವಿತ್ರತೆ, ಸಮಗ್ರತೆ ಮತ್ತು ಖ್ಯಾತಿಯನ್ನು ಸರಿಪಡಿಸಲಾಗದಂತೆ ಕಳಂಕಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇದು ದೂರಗಾಮಿ ಪರಿಣಾಮಗಳನ್ನು ಉಂಟುಮಾಡಬಹುದು. ಅದ್ದರಿಂದ ಕೋಟ್ಯಂತರ ಹಿಂದೂಗಳ ಮನಸ್ಸಿನಲ್ಲಿರುವ ಅನುಮಾನಗಳನ್ನು ನಿವಾರಿಸಲು `ಸತ್ಯವನ್ನು ಬೆಳಕಿಗೆ ತರಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಸರ್ಕಾರದ ವೈಫಲ್ಯಗಳನ್ನು ಮರೆಮಾಚಿ ರಾಜ್ಯದ ಜನರ ಗಮನವನ್ನು ಬೇರೆಡೆ ಸೆಳೆಯುವ ಲಡ್ಡು ತಯಾರಿಕೆ ಬಗ್ಗೆ ಸುಳ್ಳನ್ನು ಹಬ್ಬಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇನ್ನೂ ಬುಧವಾರ ಎನ್‍ಡಿಎ ಶಾಸಕಾಂಗ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಸಿಎಂ ಚಂದ್ರಬಾಬು ನಾಯ್ಡು, ಜಗನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ವೆಂಕಟೇಶ್ವರ ದೇವಸ್ಥಾನದ ಲಡ್ಡೂಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆರೋಪಿಸಿದ್ದರು. ಇದು ದೇಶದೆಲ್ಲಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ.