ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ಚರ್ಚೆಗಳು ಜೋರಾಗಿರುವ ನಡುವೆಯೇ, ಶಾಸಕ ಇಕ್ಬಾಲ್ ಹುಸೇನ್ ನೀಡಿರುವ ಹೇಳಿಕೆ ಹೊಸ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಗುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಭಗವಂತನ ದಯೆಯಿಂದ ಒಳ್ಳೆಯ ಕಾಲ ಬಂದಿದೆ ಎಂದು ಭಾವುಕರಾಗಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಇಕ್ಬಾಲ್ ಹುಸೇನ್, ನಮ್ಮ ನಾಯಕನಿಗೆ ಇಡೀ ರಾಜ್ಯದ ಜನರು ಬಯಸಿದ್ದನ್ನು ಭಗವಂತ ನೆರವೇರಿಸಿದ್ದಾನೆ. ದೇವರಿಗೆ ಕೋಟಿ ಕೋಟಿ ನಮಸ್ಕಾರಗಳು ಎಂದು ಹೇಳಿದರು.
ಎಲ್ಲದಕ್ಕೂ ಒಂದು ಇತಿಮಿತಿ ಇರುತ್ತದೆ. ಪಕ್ಷದ ಹೈಕಮಾಂಡ್ ಇದುವರೆಗೆ ಶಿಸ್ತಿನಿಂದ ಇರಲು ಸೂಚಿಸಿತ್ತು. ಸಮಯ ಬಂದಾಗ ಮಾತನಾಡಿ ಎಂದು ಹೇಳಲಾಗಿತ್ತು. ಈಗ ಆ ಸಮಯ ಬಂದಿದೆ. ಹೈಕಮಾಂಡ್ ಅವಕಾಶ ನೀಡಿದೆ. ನಾಯಕರು ಬೆಂಗಳೂರಿಗೆ ಬಂದ ಬಳಿಕ ಅವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.
ಪಕ್ಷದ ಕಾರ್ಯಕರ್ತರು ಹಾಗೂ ನಾಯಕರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ನಾವೆಲ್ಲರೂ ಪಕ್ಷದ ಶಿಸ್ತನ್ನು ಕಾಪಾಡಿಕೊಳ್ಳಬೇಕು. ನಿನ್ನೆ ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ. ದೆಹಲಿಯಲ್ಲಿ ಯಾರ ಜೊತೆ ಮಾತನಾಡಬೇಕಿತ್ತೋ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದೆ. ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯುತ್ತಿದ್ದೆ ಎಂದು ಹೇಳಿದರು.
ನನ್ನ ಆಸೆಯನ್ನು ಈಡೇರಿಸುವ ಕೆಲಸವನ್ನು ಭಗವಂತ ಮಾಡಿದ್ದಾರೆ. ಅವರಿಗೆ ಕೋಟಿ ಕೋಟಿ ಧನ್ಯವಾದಗಳು ಎಂದು ಇಕ್ಬಾಲ್ ಹುಸೇನ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.



