ದಿನೇಶ್ ಗುಂಡೂರಾವ್ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಶ್ರಮಿಸುವ ಜನಮುಖಿ ಶಾಸಕ: ಸಿಎಂ ಮೆಚ್ಚುಗೆ

0
Spread the love

ಬೆಂಗಳೂರು: ದಿನೇಶ್ ಗುಂಡೂರಾವ್ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಶ್ರಮಿಸುವ ಜನಮುಖಿ ಶಾಸಕರು. ಇವರಿಗೆ ಉತ್ತಮ ಅವಕಾಶಗಳಿವೆ. ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಬಹುಮತದಿಂದ ಗೆಲ್ಲಿಸಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

Advertisement

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆಯ ಆಧುನೀಕರಣ ಮತ್ತು ಗಾಂಧಿನಗರ ಕ್ಷೇತ್ರದ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಕೆಂಪೇಗೌಡರ ಕಾಲದಲ್ಲಿ ಪೇಟೆ ಬೀದಿಯಾಗಿದ್ದ ಇಲ್ಲಿನ‌ ಪೇಟೆಗಳು ಈಗಲೂ ಆ ಕಾಲದ ಸ್ವಭಾವವನ್ನೇ ಹೊಂದಿವೆ.

ನಾವೊಮ್ಮೆ ಇಲ್ಲಿನ ರಸ್ತೆಗಳ ಅಗಲೀಕರಣದ ಬಗ್ಗೆ ಚಿಂತಿಸಿದ್ದೆವು. ಆದರೆ ದಿನೇಶ್ ಗುಂಡೂರಾವ್ ಅವರು ಒಪ್ಪಲಿಲ್ಲ. ನಮ್ಮ ಜನಗಳಿಗೆ ಸಮಸ್ಯೆ ಆಗತ್ತೆ ಸರ್ ಎಂದು ಸ್ಪಷ್ಟವಾಗಿ ನಿರಾಕರಿಸಿ, ರಸ್ತೆ ಅಗಲೀಕರಣ ಮಾಡದೆ, ರಸ್ತೆಗಳ ಆಧುನೀಕರಣ ಮತ್ತು ಚಿಕ್ಕಪೇಟೆಯ ಅಭಿವೃದ್ಧಿಗೆ ಯೋಜನೆ ರೂಪಿಸಿ ಜಾರಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಬೆಂಗಳೂರು ವಿಪರೀತವಾಗಿ ಬೆಳೆಯುತ್ತಿರುವ ನಗರ. ಈ ನಗರದ ಜನಸಂಖ್ಯೆ ಹೆಚ್ಚುತ್ತಿದ್ದು ಈ ಸವಾಲಿನ ಜೊತೆಗೇ ಬೆಂಗಳೂರಿನ‌ ರಸ್ತಡಗಳ ಆಧುನೀಕರಣ ಮತ್ತು ಅಭಿವೃದ್ಧಿಗೆ ಹೇರಳವಾದ ಹಣ ಒದಗಿಸುತ್ತಿದ್ದೇವೆ ಎಂದರು.

ಬೆಂಗಳೂರಿನ ಮೆಟ್ರೋಗೆ ಶೇ87 ರಷ್ಟು ಹಣ ಕೊಡುವುದು ನಾವೇ. ಅಂದರೆ ರಾಜ್ಯದ ಜನತೆಯ ಶೇ87 ರಷ್ಟು ಹಣದಲ್ಲಿ ಮೆಟ್ರೋ ಆಗಿದೆ. ಆದರೆ ಬಿಜೆಪಿಯವರು ಮೆಟ್ರೋ ಕೇಂದ್ರದ ಯೋಜನೆ ಎಂದು ತಿರುಚಿ ಸುಳ್ಳು ಹೇಳ್ತಾರೆ ಎಂದರು.

GST ಜಾರಿ ಮಾಡಿ 8 ವರ್ಷ ಇಡೀ ಭಾರತೀಯರ ಹಣ ಸುಲಿದಿದ್ದು ಇದೇ ಕೇಂದ್ರ ಸರ್ಕಾರ ಮತ್ತು ಇದೇ ನರೇಂದ್ರ ಮೋದಿ. ಎಂಟು ವರ್ಷ ಸುಲಿಗೆ ಮಾಡಿ ಈಗ ಮೋದಿ ಫೋಟೋ ಹಾಕಿ “ದೀಪಾವಳಿ ಗಿಫ್ಟ್” ಎಂದು ನಾಚಿಕೆ ಇಲ್ಲದೆ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಇಂಥಾ ನಕಲಿಗಳಿಗೆ ನೀವು ಓಟು ಹಾಕಿ ಈಗ ಏಕೆ ತಲೆ ಮೇಲೆ ಕೈ ಹೊತ್ತುಕೊಳ್ತೀರಿ ಎಂದು ಸಾರ್ವಜನಿಕರಿಗೆ ಪ್ರಶ್ನಿಸಿದರು.

“ದೀಪಾವಳಿ ಗಿಫ್ಟ್” ಎಂದು ಜಾಹಿರಾತು ನೀಡಿರುವ ಮೋದಿ ಸರ್ಕಾರದ. GST ಬದಲಾವಣೆಯಿಂದ ರಾಜ್ಯಕ್ಕೆ, ರಾಜ್ಯದ ಜನರಿಗೆ 15 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಲೆಕ್ಕ ಬಿಚ್ಚಿಟ್ಟರು.

ಒಂದು ಲಕ್ಷದ 20 ಸಾವಿರ ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಮುಂದಾಗಿದ್ದೀವಿ. ಕೇಂದ್ರದಿಂದ ನಯ ಪೈಸೆ ಕೊಡುತ್ತಿಲ್ಲ ಎಂದು ವಿವರಿಸಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಹೊಸ ರಸ್ತೆ ನಿರ್ಮಿಸಲಿಲ್ಲ. ಒಂದೇ ಒಂದು ರಸ್ತೆ ಗುಂಡಿ ಮುಚ್ಚಲಿಲ್ಲ. ಈಗ ಇರುವ ರಸ್ತೆಗಳೆಲ್ಲಾ ಕಾಂಗ್ರೆಸ್ ಸರ್ಕಾರದ ಕಾಲದಲ್ಲೇ ಆಗಿರುವಂಥವು ಎಂದರು.

RSS ನವರು ನಮ್ಮನ್ನು ಬಿಡಲ್ಲ ಅಂತ ಆರ್.ಅಶೋಕ್ ಹೇಳ್ತಿದ್ದರು

ಬಿಜೆಪಿಯ ಆರ್.ಅಶೋಕ್, ವಿಜಯೇಂದ್ರ ಸೇರಿ ಯಾರದ್ದೂ ಸ್ವಂತ ಮಾತು ಇಲ್ಲ. RSS ನವರು ಬರೆದುಕೊಟ್ಟಿದ್ದನ್ನು ಓದಿ ಹೋಗುವುದಷ್ಟೆ ಇವರ ಕೆಲಸ ಎಂದರು.

ವಿಧಾನಸಭಾ ಅಧಿವೇಶನ‌ ವೇಳೆ ಒಮ್ಮೆ ಆರ್.ಅಶೋಕ್ ಗೆ ಕೇಳಿದ್ದೆ. ಆಗ ಆರ್.ಅಶೋಕ್ ಅವರು, “ಏನು ಮಾಡೋದು ಸರ್. RSS ನವರು ಒಬ್ರು ಬಂದು ಕೂತಿರ್ತಾರೆ. ಅವರು ಹೇಳಿದ್ದನ್ನು ಹೇಳದೇ ಹೋದರೆ ನಮ್ಮನ್ನು ಬಿಡಲ್ಲ ಸಾರ್” ಎಂದು ಉತ್ತರಿಸಿದ್ದರು ಎಂದು ವಿವರಿಸಿದರು.

ಒಂದು ಲೇಯರ್ ತಾರ್ ರಸ್ತೆ ಹಾಕಲು ಸೂಚನೆ

ಒಂದು ವಾರದಲ್ಲಿ ರಸ್ತೆ ಗುಂಡಿಗಳನ್ನೆಲ್ಲಾ ಮುಚ್ಚಿ ಒಂದು ಲೇಯರ್ ತಾರ್ ಹಾಕಬೇಕು ಎಂದು ಗ್ರೇಟರ್ ಬೆಂಗಳೂರು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ವೇದಿಕೆಯಿಂದಲೇ ಸೂಚನೆ ನೀಡಿದರು.

ಮೋದಿ ಮೋದಿ ಅಂತೀರಲ್ಲ: ಅಮವಾಸೆ ಸೂರ್ಯ ರಾಜ್ಯಕ್ಕೆ ಆಗುತ್ತಿರುವ ದ್ರೋಹ ಪ್ರಶ್ನಿಸಿದ್ದಾರಾ?

ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ನಿಮ್ಮ ಪರವಾಗಿ ಪಾರ್ಲಿಮೆಂಟಿನಲ್ಲಿಬಾಯಿ ಬಿಟ್ಟಿದ್ದಾರಾ ಹೇಳಿ ಎಂದು ಸಿ.ಎಂ ಪ್ರಶ್ನಿಸಿದರು. ಸಂಸದ ತೇಜಸ್ವಿ ಸೂರ್ಯ. ನಾನು ಇವರನ್ನು ಅಮವಾಸೆ ಸೂರ್ಯ ಅಂತ ಕರಿತೀನಿ. ರಾಜ್ಯದ ಆಗುತ್ತಿರುವ ಅನ್ಯಾಯ, ದ್ರೋಹದ ಬಗ್ಗೆ ಅಮವಾಸೆ ಸೂರ್ಯ ಇವತ್ತಿನವರೆಗೆ ಬಾಯಿ ಬಿಟ್ಟಿದ್ದಾರಾ?

ಸಚಿವರದ ಶೋಭಾ ಕರಂದ್ಲಾಜೆ, ಹೆಚ್.ಡಿ.ಕುಮಾರಸ್ವಾಮಿ ಅವರು ಮೋದಿ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಮೋಸ, ದ್ರೋಹದ ಬಗ್ಗೆ ಒಂದೇ ಒಂದು ದಿನ ಬಾಯಿ ಬಿಟ್ಟಿದ್ದಾರಾ ? ಇಂಥವರನ್ನು ಗೆಲ್ಲಿಸಿ ನಿಮಗಾಗಲೀ, ರಾಜ್ಯಕ್ಕಾಗಲೀ, ಅವರು ಗೆದ್ದ ಪಾರ್ಲಿಮೆಂಟ್ ಕ್ಷೇತ್ರಕ್ಕಾಗಲೀ ಏನು ಸಿಕ್ಕಿದೆ ಹೇಳಿ ಎಂದು ಪ್ರಶ್ನಿಸಿದರು‌.

ವ್ಯವಸ್ಥಿತವಾಗಿ ಬೆಂಗಳೂರು ಅಭಿವೃದ್ಧಿ

ಹೊಸ ಹೊಸ ಹೊರ ವರ್ತುಲ ರಸ್ತೆ, ಸುರಂಗ ಮಾರ್ಗ, ಫ್ಲೈ ಓವರ್, ಡಬಲ್ ಡೆಕರ್ ರಸ್ತೆಗಳು ಸೇರಿ ಬೆಂಗಳೂರಿನ ಅಭಿವೃದ್ಧಿಗೆ 1,20,000 ಕೋಟಿ ನೀಡುತ್ತಿದ್ದೇವೆ. ಆದ್ದರಿಂದ ಕೆಲಸ ಮಾಡುವವರ ಪರವಾಗಿ ನೀವು ಗಟ್ಟಿಯಾಗಿ ನಿಲ್ಲಬೇಕು. ದಿನೇಶ್ ಗುಂಡೂರಾವ್ ಅವರಂಥಾ ಶಾಸಕ ಸಿಕ್ಕಿರುವುದು ನಿಮ್ಮ ಅದೃಷ್ಟ ಎಂದರು


Spread the love

LEAVE A REPLY

Please enter your comment!
Please enter your name here