ಬೆಳಗಾವಿ: ಧಾರವಾಡ ಹೆಚ್ಚುವರಿ ಎಸ್.ಪಿ ಅವರ ಮೇಲೆ ಸಿಎಂ ಸಿದ್ದರಾಮಯ್ಯ ಗರಂ ಆದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಲೆ ಏರಿಕೆ ವಿರೋಧಿಸಿ ಇಂದು ಕಾಂಗ್ರೆಸ್ ಪ್ರತಿಭಟನಾ ಸಭಾ ಆಯೋಜಿಸಿತ್ತು. ಸಿಎಂ ಮಾತನಾಡುವಾಗ ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ಕಪ್ಪು ಪಟ್ಟಿಯನ್ನು ಧರಿಸಿ ಪ್ರತಿಭಟಿಸಿದರು.
ಈ ವೇಳೆ ಸಂಯಮ ಕಳೆದುಕೊಂಡ ಸಿಎಂ ಹೆಚ್ಚುವರಿ ಎಸ್‌ಪಿಯನ್ನು ತರಾಟೆಗೆ ತೆಗೆದುಕೊಂಡರು. ಧಾರವಾಡದ ಹೆಚ್ಚುವರಿ ಎಸ್‌ಪಿ ನಾರಾಯಣ ಬರಮನಿ ಕರೆದು ಅವರ ಕಪಾಳಕ್ಕೆ ಹೊಡೆಯುವಂತೆ ಸನ್ನೆ ಮಾಡಿದರು.
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಇಂದು ಕಾಂಗ್ರೆಸ್ ಸಮಾವೇಶವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಆಗಮಿಸಿದ್ದರು. ಬೇರೆ ನಾಯಕರ ಭಾಷಣದವರೆಗೆ ಸುಮ್ಮನೇ ಕುಳಿತಿದ್ದ ಕಾರ್ಯಕರ್ತೆಯರು ಸಿಎಂ ಭಾಷಣ ಮಾಡುವಾಗ ಕಪ್ಪು ಪಟ್ಟಿಯನ್ನು ತೋರಿಸಿ ಪ್ರತಿಭಟಿಸಿದರು.
ಇದ್ದಕ್ಕಿದ್ದಂತೆ ತಮ್ಮ ಮುಂಭಾಗವೇ ಪ್ರತಿಭಟನೆ ನೋಡಿ ಸಿಎಂ ಒಂದು ಕ್ಷಣ ಭಾಷಣ ಮಾಡುವುದನ್ನು ನಿಲ್ಲಿಸಿದರು. ನಿಲ್ಲಿಸಿದ ಬಳಿಕ ಯಾರದು ಎಸ್‌ಪಿ ಎಂದು ಹೇಳಿ ವೇದಿಕೆಗೆ ಬರುವಂತೆ ಹೇಳಿದ್ದಾರೆ. ಆಗ ಹೆಚ್ಚುವರಿ ಎಸ್‌ಪಿ ಬರುತ್ತಿದ್ದಂತೆಯೇ ಏನ್ರೀ ಇದು, ಏನು ಮಾಡ್ತಾ ಇದ್ದೀರಿ ಎಂದು ಪ್ರಶ್ನಿಸಿ ಕೈ ಎತ್ತಿ ಸಿಟ್ಟು ಹೊರಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಸಚಿವ ಎಂ ಬಿ ಪಾಟೀಲ್ ಅವರು ಸಿಎಂ ಹತ್ತಿರ ಬಂದು ಸಮಾಧಾನ ಮಾಡಿದ್ದಾರೆ.