ಪ್ರಭಾಸ್ ಅಭಿನಯದ ಹಾರರ್ ಕಾಮಿಡಿ ಸಿನಿಮಾ ‘ದಿ ರಾಜಾ ಸಾಬ್’ ಕೊನೆಗೂ ತೆರೆಕಾಣಲು ಸಜ್ಜಾಗಿದೆ. ಬಹಳ ದಿನಗಳಿಂದ ಮುಂದೂಡಲ್ಪಡುತ್ತಿದ್ದ ಸಿನಿಮಾದ ಬಿಡುಗಡೆ ಇದೀಗ ಸಂಕ್ರಾಂತಿ ಹಬ್ಬಕ್ಕೆ ಫಿಕ್ಸ್ ಆಗಿದೆ. ಈ ಹಿನ್ನೆಲೆ ನಿನ್ನೆ ನಡೆದ ಪ್ರೀ ರಿಲೀಸ್ ಕಾರ್ಯಕ್ರಮ ಭರ್ಜರಿಯಾಗಿ ನೆರವೇರಿದ್ದು, ನಿರ್ದೇಶಕ ಮಾರುತಿ ಅವರ ಮಾತುಗಳು ಅಭಿಮಾನಿಗಳ ಗಮನ ಸೆಳೆದಿವೆ.
ವೇದಿಕೆ ಮೇಲೆ ಮಾತನಾಡಿದ ಮಾರುತಿ, ಪ್ರಭಾಸ್ ಅವರನ್ನು ಮನಸಾರೆ ಹೊಗಳಿದರು. “ಪ್ರಭಾಸ್ ಅವರ ನಟನೆ, ಸ್ಟೈಲ್ ಮಾತ್ರವಲ್ಲ, ಅವರ ಮಾನವೀಯತೆ ಮತ್ತು ತಾಳ್ಮೆ ನಮಗೆಲ್ಲ ಪ್ರೇರಣೆ. ಇಂಥ ದೊಡ್ಡ ಸ್ಟಾರ್ ಜೊತೆ ಕೆಲಸ ಮಾಡುತ್ತಿದ್ದೇವೆ ಅಂದ್ರೆ ಸುಮ್ಮನೆ ಸಿನಿಮಾ ಮಾಡೋಕೆ ಆಗಲ್ಲ. ನಾವು ಶ್ರಮಪಟ್ಟು ಅದ್ಭುತ ಸಿನಿಮಾ ಮಾಡಿದ್ದೇವೆ” ಎಂದು ಹೇಳಿದರು.
‘ಆದಿಪುರುಷ್’ ಸಿನಿಮಾ ಸಮಯದಲ್ಲಿ ಪ್ರಭಾಸ್ ಅವರನ್ನು ಮೊದಲ ಬಾರಿ ಭೇಟಿಯಾದ ಸಂದರ್ಭವನ್ನು ಹಂಚಿಕೊಂಡ ಮಾರುತಿ, “ಆ ಭೇಟಿಯಲ್ಲಿ ನಾನು ಅವರನ್ನು ಚೆನ್ನಾಗಿ ನಗಿಸಿದ್ದೆ. ಅದುವರೆಗೂ ನಾನು ಸಾಮಾನ್ಯ ಸಿನಿಮಾಗಳನ್ನೇ ಮಾಡುತ್ತಿದ್ದೆ. ಆದರೆ ಪ್ರಭಾಸ್ ಅವರು ನನ್ನ ಜೀವನಕ್ಕೆ ಬಂದ ನಂತರ ನನ್ನ ಪಯಣವೇ ಬದಲಾಗಿದೆ. ಅವರು ನನ್ನ ಹಿಂದೆ ನಿಂತ ಶಕ್ತಿಯೇ ನನ್ನನ್ನು ಮುಂದೆ ತಳ್ಳಿತು” ಎಂದು ಭಾವುಕವಾಗಿ ಮಾತನಾಡಿದರು.
ಕಳೆದ ಮೂರು ವರ್ಷಗಳ ಶ್ರಮದ ಬಗ್ಗೆ ಮಾತನಾಡುವಾಗ ಮಾರುತಿ ಕಣ್ಣೀರಿಟ್ಟರು. “ನಾನು ಪ್ರೇಕ್ಷಕನಂತೆ ಸಿನಿಮಾ ನೋಡಿದ್ದೇನೆ. ಪ್ರತಿ ಬಾರಿ ನೋಡಿದಾಗಲೂ ಕಣ್ಣೀರು ಬರುತ್ತದೆ. ಪ್ರಭಾಸ್ ಅವರ ಅಭಿನಯ ನನ್ನನ್ನು ಆ ಮಟ್ಟಿಗೆ ತಟ್ಟಿದೆ” ಎಂದರು.
ಇದೇ ವೇಳೆ ಮಾರುತಿ ನೀಡಿದ ಹೇಳಿಕೆ ಸಖತ್ ವೈರಲ್ ಆಗಿದೆ. “ನಾವು ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಆದರೂ ಈ ಸಿನಿಮಾ ನಿಮಗೆ 1% ಆದರೂ ಬೇಸರ ತಂದರೆ, ನನ್ನ ಮನೆ ವಿಳಾಸ ವಿಲ್ಲಾ ನಂಬರ್ 17, ವಿಲ್ಲಾ ಲಕ್ಷುರಿಯಾ, ಕೊಂಡಾಪುರ, ಹೈದರಾಬಾದ್. ಅಭಿಮಾನಿಗಳು ನೇರವಾಗಿ ಬಂದು ನನ್ನನ್ನು ಪ್ರಶ್ನಿಸಬಹುದು” ಎಂದು ಪ್ರಭಾಸ್ ಅಭಿಮಾನಿಗಳಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.



