ಆರೋಗ್ಯ ಇಲಾಖೆಯ ಕಿರಿಯ ಪ್ರಯೋಗಶಾಲಾ ತಂತ್ರಜ್ಞರೊಬ್ಬರು ಪ್ಲಾಸ್ಟಿಕ್ ಮುಕ್ತ, ಪರಿಸರ ಸ್ನೇಹಿ ಹಾಗೂ ದೇಶ ಭಕ್ತಿಗೆ ಸಂಬಂಧಿಸಿದಂತೆ ಗಣೇಶ ಮೂರ್ತಿಯ ಅಲಂಕಾರ ಮಾಡಿದ್ದು, ಹಲವರು ಇವರ ಮನೆಗೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬೆಟಗೇರಿಯ ನಿವಾಸಿಯೊಬ್ಬರು ತಮ್ಮ ಮನೆಯ ಗಣೇಶನನ್ನು ಸಾರ್ವಜನಿಕ ಗಣೇಶ ಮೂರ್ತಿಯಂತೆ ಅಲಂಕರಿಸಿದ್ದಾರೆ ಮತ್ತು ಆಪರೇಷನ್ ಸಿಂದೂರ್‌ನ ಫೋಟೋಗಳಿಂದ ಅಲಂಕರಿಸಿದ್ದಾರೆ.
ಗಣೇಶನ ಮುಂದೆ ಹಿಮಾಲಯ ಪರ್ವತ ಶ್ರೇಣಿ, ಅದರೊಂದಿಗೆ ಆಪರೇಷನ್ ಸಿಂದೂರವನ್ನು ಬಿಂಬಿಸುವ ಬ್ಯಾನರ್‌ಗಳು ಗಣೇಶನ ಭಕ್ತಿ ಭಾವದ ಜತೆಗೆ ಮನದಲ್ಲಿ ದೇಶಪ್ರೇಮವನ್ನು ಅರಳಿಸುತ್ತಿವೆ. ಈ ಆಪರೇಷನ್ ಸಿಂದೂರ ಗಣೇಶ ಇರುವುದು ಬೆಟಗೇರಿಯ ವೆಲ್‌ಫೇರ್ ಟೌನ್‌ಶಿಪ್‌ನ ಮಂಜುನಾಥ ಭಂಡಾರಿ ಅವರ ಮನೆಯಲ್ಲಿ.
ನೆರೆಹೊರೆಯವರು ಮತ್ತು ಇತರ ಸಂದರ್ಶಕರು ಮಂಜುನಾಥ ಭಂಡಾರಿ ಅವರ ಮನೆಗೆ ಗಣೇಶನ ವಿಶೇಷ ಅಲಂಕಾರವನ್ನು ನೋಡಲು ಭೇಟಿ ನೀಡುತ್ತಿದ್ದಾರೆ. ಈ ವರ್ಷದ ಅಲಂಕಾರ ಅಷ್ಟೇ ಅಲ್ಲ, ಪ್ರತಿ ವರ್ಷ ಗಣೇಶ ಮೂರ್ತಿಯ ಅಲಂಕಾರವೂ ಇವರ ಮನೆಯಲ್ಲಿ ವಿಶೇಷವಾಗಿಯೇ ಇರುತ್ತದೆ. ಮಂಜುನಾಥ ಮತ್ತು ಅವರ ಪತ್ನಿ ಪುಷ್ಪಾ, ಮಕ್ಕಳು ಜಯಂತ ಮತ್ತು ಶ್ರೇಯಾ ಎಲ್ಲರೂ ಜತೆಗೂಡಿ ಈ ಅಲಂಕಾರದಲ್ಲಿ ಪಾಲ್ಗೊಳ್ಳುತ್ತಾರೆ. ಈ ಕುಟುಂಬವೂ ಪ್ರತಿ ವರ್ಷ ಪರಿಸರ ಸ್ನೇಹಿ ಅಲಂಕಾರ ಮಾಡುತ್ತ ಬಂದಿದೆ ಮತ್ತು ಥರ್ಮಾಕೋಲ್ ಹಾಗೂ ಇತರೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿಲ್ಲ.
ಮಂಜುನಾಥ ಭಂಡಾರಿ ಪ್ರಯೋಗಾಲಯ ತಂತ್ರಜ್ಞರಾಗಿದ್ದು, ಬೆಟಗೇರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಿರಿಯ ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ವರ್ಷ ವಿಶೇಷ ಸಂದೇಶ ಮತ್ತು ಫೋಟೋದಿಂದ ಗಣೇಶನನ್ನು ಅಲಂಕರಿಸುವಲ್ಲಿ ಇವರು ಆಸಕ್ತಿ ಹೊಂದಿದ್ದಾರೆ. ಇವರು ಗಣೇಶ ಹಬ್ಬದ ನೆಪವಿಟ್ಟುಕೊಂಡು ಪರಿಸರ ಸ್ನೇಹಿ ಕಾರ್ಯವನ್ನು ಹಮ್ಮಿಕೊಳ್ಳುತ್ತಾರೆ. ಕಳೆದ ಬಾರಿ 1001 ಸಸಿಗಳನ್ನು ವಿತರಿಸಿ ಪರಿಸರ ಜಾಗೃತಿ ಮೂಡಿಸಿದ್ದರು.
ಸಂಸ್ಕೃತ ಭಾರತೀ ಜಿಲ್ಲಾ ಶಿಬಿರ ಆಯೋಜಕ ಮೌನೇಶ ಭಜಂತ್ರಿ ಮಂಜುನಾಥ ಅವರ ಮನೆಗೆ ಭೇಟಿ ನೀಡಿದ ನಂತರ, ಹಿಮಾಲಯದ ಮಂಜಿನ ಗಿರಿಶಿಖರಗಳು, ತ್ರಿಶೂಲಗಳು, ಶಿವಲಿಂಗ ಮುಂದೆ ಕುಳಿತ ಗಣಪ ಮನಕ್ಕೆ ಮುದ ನೀಡಿದರೆ, ಆಪರೇಷನ್ ಸಿಂದೂರ, ತ್ರಿವರ್ಣ ಧ್ವಜ ಹಾಗೂ ಕ್ಷಿಪಣಿಗಳನ್ನು ನೋಡಿದಾಗ ದೇಶಪ್ರೇಮ ಉಕ್ಕಿ ಬರುತ್ತದೆ. ಒಟ್ಟಿನಲ್ಲಿ ಧನ್ಯತಾ ಭಾವ ಮೂಡಿಸಿ, ಪರಿಸರದ ಬಗ್ಗೆ ಕಾಳಜಿ ಮನದಂಚಿನಲ್ಲಿ ಮಿಂಚಿನಂತೆ ಮೂಡಿಸುವ ಪ್ರಯತ್ನ ಮಂಜುನಾಥ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಜುನಾಥ ಅವರು ಅವರ ಗಣೇಶ ಹಬ್ಬದ ಬಗ್ಗೆ ಹೇಳಿದ್ದು ಹೀಗೆ-`ಮೊದಲ ಬಾರಿಗೆ ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸಲು ನಿರ್ಧರಿಸಿದಾಗ ಮುತ್ತಲ ಎಲೆಗಳಿಂದ ಚಹಾದ ಕಪ್‌ಗಳನ್ನು ತಯಾರಿಸಿ ಒಟ್ಟು 500 ಚಹಾ ಕಪ್‌ಗಳಿಂದ ಅಲಂಕಾರ ಮಾಡಿದ್ದೆವು. ಪ್ರತಿ ವರ್ಷವೂ ವಿಶೇಷ ರೀತಿಯಿಂದ ಗಣೇಶ ಹಬ್ಬ ಆಚರಿಸಲು ಖುಷಿ ಎನಿಸುತ್ತದೆ. ಎಲ್ಲರೂ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸಲು ನಮ್ಮ ವಿನಂತಿ. ನಮ್ಮ ಸ್ನೇಹಿತರು, ಹಿತೈಷಿಗಳು, ಬಂಧು ಬಳಗದವರು ನಮ್ಮ ಗಣೇಶನನ್ನು ಮತ್ತು ಅಲಂಕಾರವನ್ನು ನೋಡಿ ಸಂತಸಪಡುತ್ತಾರೆ ಹಾಗೂ ನಮ್ಮನ್ನು ಪ್ರೋತ್ಸಾಹಿಸುತ್ತಾರೆ’.
– ರಘೋತ್ತಮ ಕೊಪ್ಪರ.
ಪತ್ರಕರ್ತರು, ಪಾರಂಪರಿಕ ವೈದ್ಯರು.