ಬೆಂಗಳೂರು: ಕಮರ್ಷಿಯಲ್ ಸಿಲಿಂಡರ್ ದರದಲ್ಲಿ ಏಕಾಏಕಿ ಭಾರಿ ಏರಿಕೆ ಆಗಿರುವ ಬೆನ್ನಲ್ಲೇ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಪಿಜಿ ಉದ್ಯಮಕ್ಕೂ ಅದರ ಬಿಸಿ ತಟ್ಟಿದೆ.
ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆಯನ್ನು ಸುಮಾರು ₹993ರವರೆಗೆ ಹೆಚ್ಚಿಸಿರುವ ಪರಿಣಾಮ ಹೋಟೆಲ್ ಉದ್ಯಮದ ಜೊತೆಗೆ ಪೇಯಿಂಗ್ ಗೆಸ್ಟ್ (PG) ಮಾಲೀಕರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದರಿಂದಾಗಿ ಬೆಂಗಳೂರಿನ ಹಲವೆಡೆ ಪಿಜಿ ಬಾಡಿಗೆ ದರವನ್ನು ಶೇಕಡ 5 ರಿಂದ 10 ರಷ್ಟು ಹೆಚ್ಚಿಸಲು ಪಿಜಿ ಅಸೋಸಿಯೇಷನ್ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಈಗಾಗಲೇ ಹೆಚ್ಚುತ್ತಿರುವ ಜೀವನ ವೆಚ್ಚದ ನಡುವೆ ಮತ್ತೊಂದು ಬಾಡಿಗೆ ಏರಿಕೆಯ ಭೀತಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ.
ಪಿಜಿ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಗ್ಯಾಸ್ ದರ ಏರಿಕೆಯಿಂದ ಪಿಜಿ ನಿರ್ವಹಣೆ ಕಷ್ಟಕರವಾಗಿದ್ದು, ಆಹಾರ ತಯಾರಿಕೆ ವೆಚ್ಚ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಕೆಲವು ಪಿಜಿಗಳಲ್ಲಿ ಈಗಾಗಲೇ ಸೌದೆ ಒಲೆ ಬಳಸಿ ಅಡುಗೆ ಮಾಡಲಾಗುತ್ತಿದೆ ಮತ್ತು ಮೆನು ಕೂಡ ಕಡಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಪೂರೈಕೆ ವ್ಯವಸ್ಥೆಯಲ್ಲಿಯೂ ವ್ಯತ್ಯಯ ಉಂಟಾಗಿದ್ದು, ಇದರ ನೇರ ಪರಿಣಾಮವಾಗಿ ದರ ಏರಿಕೆ ಸಂಭವಿಸಿದೆ ಎಂದು ಉದ್ಯಮ ವಲಯ ಹೇಳುತ್ತಿದೆ.
ಈ ನಡುವೆ ಆಟೋ ಎಲ್‌ಪಿಜಿ ಗ್ಯಾಸ್ ದರವೂ ಲೀಟರ್‌ಗೆ ₹5.73 ಪೈಸೆ ಏರಿಕೆಯಾಗಿರುವುದರಿಂದ ಆಟೋ ಚಾಲಕರೂ ಮೀಟರ್ ದರ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದಾರೆ. ಹೀಗಾಗಿ ಹೋಟೆಲ್, ಆಟೋ ಹಾಗೂ ಪಿಜಿ ಕ್ಷೇತ್ರಗಳು ಒಂದೇ ಸಮಯದಲ್ಲಿ ಬೆಲೆ ಏರಿಕೆಯ ಒತ್ತಡಕ್ಕೆ ಒಳಗಾಗಿರುವುದು ಸ್ಪಷ್ಟವಾಗಿದೆ.
ಸತತ ಮೂರು ತಿಂಗಳಲ್ಲಿ ಸಿಲಿಂಡರ್ ದರದಲ್ಲಿ ಸುಮಾರು ₹1200ರಷ್ಟು ಏರಿಕೆ ಕಂಡಿರುವುದರಿಂದ ಮಧ್ಯಮ ವರ್ಗದ ಜನರ ಜೀವನ ವೆಚ್ಚ ಮತ್ತಷ್ಟು ಹೆಚ್ಚಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.



