ವಿಜಯಸಾಕ್ಷಿ ಸುದ್ದಿ, ನರೇಗಲ್ : ಪದವಿ ಪಡೆದ ಎಲ್ಲರಿಗೂ ಸರಕಾರದ ನೌಕರಿಯೇ ಬೇಕೆಂದರೆ ಸಾಧ್ಯವಾಗುವುದಿಲ್ಲ. ಅದರ ಬದಲಾಗಿ ನೀವು ಸ್ವಾವಲಂಬಿ ಬದುಕನ್ನು ಸಾಗಿಸಲು ಬೇಕಾಗುವ ಕೌಶಲ್ಯಗಳನ್ನು ಬಳಸಿಕೊಂಡು ಸ್ವಾವಲಂಬಿಗಳಾಗಿರಿ ಎಂದು ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ವಿವಿಧ ಸಾಂಘಿಕ ಚಟುವಟಿಕೆಗಳ ಸಮಾರೋಪ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗಿನ ದಿನಗಳಲ್ಲಿ ಸ್ವಾವಲಂಬಿ ಜೀವನ ನಡೆಸಲು ಸಾವಿರಾರು ದಾರಿಗಳಿವೆ. ಆದರೆ ಈ ದಾರಿಯಲ್ಲಿ ಹೋಗಲು ಕೌಶಲ್ಯದ ಅವಶ್ಯಕತೆ ಇದೆ. ಅದನ್ನು ನೀವು ಬೆಳೆಸಿಕೊಳ್ಳಬೇಕು. ಕೆ.ಎ.ಎಸ್, ಐ.ಎ.ಎಸ್. ಪರೀಕ್ಷೆಗಳ ಕಡೆಗೆ ನಿಮ್ಮ ಗಮನ ಹರಿದರೆ ಅದರಿಂದ ಉತ್ತಮ ಅಧಿಕಾರಿಗಳಾಗಬಹುದು. ಇಂಟರ್‌ನೆಟ್ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ನೀವು ಜೀವನದಲ್ಲಿ ಉನ್ನತ ಸ್ಥಾನವನ್ನು ಗಳಿಸಬಹುದು ಎಂದು ಹೇಳಿದರು.
ಗುಡಗೇರಿ ಕಾಲೇಜಿನ ಪ್ರಾಚಾರ್ಯ ಜಿ.ಸಿ. ಗುಮ್ಮಗೋಳಮಠ ಮಾತನಾಡಿ, 2007ರಲ್ಲಿ ನರೇಗಲ್ಲ ಪಟ್ಟಣದಲ್ಲಿ ಪ್ರಥಮದರ್ಜೆ ಕಾಲೇಜು ಪ್ರಾರಂಭವಾದಾಗ ನಾನು ಪ್ರಾಚಾರ್ಯನಿದ್ದೆ. ಈಗ ಈ ಮಹಾವಿದ್ಯಾಲಯ ಬೆಳೆದು ನಿಂತಿರುವ ಪರಿಯನ್ನು ಕಂಡು ನನಗೆ ಹೆಮ್ಮೆಯಾಗಿದೆ. ಈ ಕಾಲೇಜು ಹೀಗೇ ಉತ್ತರೋತ್ತರ ಅಭಿವೃದ್ಧಿಯನ್ನು ಕಾಣಲಿ ಎಂದು ಹಾರೈಸಿದರು.
ಕಾಲೇಜು ಪ್ರಾಚಾರ್ಯ ಈ.ಆರ್. ಲಗಳೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶರಣಪ್ಪ ಕಮಗೂಳಿ ಪ್ರಾರ್ಥಿಸಿದರು. ಪ್ರಾಧ್ಯಾಪಕಿ ಜಯಶ್ರೀ ಮುತಗಾರ ಸ್ವಾಗತಿಸಿದರು. ಪ್ರಾಧ್ಯಾಪಕ ಎಸ್.ಎಲ್. ಗುಳೇದ ಗುಡ್ಡ ಮತ್ತು ಎಮ್.ಎಫ್. ತಹಸೀಲ್ದಾರ ಪರಿಚಯಿಸಿದರು. ಪ್ರಾಧ್ಯಾಪಕಿ ಸುನಂದಾ ಮುಂಜಿ ವರದಿ ವಾಚನ ನೀಡಿದರು. ಮೀನಾಕ್ಷಿ ಕೆ.ಎಚ್. ವಂದಿಸಿದರು.
ಈ ಸಾರೆ ನ್ಯಾಕ್ ಕಮಿಟಿಯಿಂದ ಈ ಕಾಲೇಜಿಗೆ ಬ ಪ್ಲಸ್ ಶ್ರೇಣಿ ದೊರಕಿದೆ ಎಂದು ತಿಳಿದು ಸಂತೋಷವಾಯಿತು. ಆದರೆ ಇಲ್ಲಿನ ಶಿಕ್ಷಕರ ಶ್ರಮ ಇಲ್ಲಿಗೇ ನಿಲ್ಲದೆ ಎ ಗ್ರೇಡ್ ಪಡೆಯಲು ಶ್ರಮಿಸಬೇಕೆಂದು ಶಾಸಕ ಜಿ.ಎಸ್. ಪಾಟೀಲ ಹುರಿದುಂಬಿಸಿದರು.