ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ : ಬಸವರಾಜ ಬೊಮ್ಮಾಯಿ

0
Congratulatory ceremony for new MPs Basavaraja Bommayi and B.Y. Raghavendra
Spread the love

ವಿಜಯಸಾಕ್ಷಿ ಸುದ್ದಿ, ಹಾವೇರಿ : ಕಾಂಗ್ರೆಸ್ ಶಾಸಕರು ತಮ್ಮ ಸರ್ಕಾರದ ಮೇಲೆಯೇ ವಿಶ್ವಾಸ ಕಳೆದುಕೊಂಡಿದ್ದು, ಗ್ಯಾರಂಟಿ ಯೋಜನೆಗಳನ್ನು ಕೈಬಿಡಲು ಒತ್ತಾಯಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಅವರು ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಜಗಜ್ಯೋತಿ ಸಾಂಸ್ಕೃತಿಕ ಕೇಂದ್ರದಲ್ಲಿ ಹಿರೇಕೆರೂರು ಮತ್ತು ರಟ್ಟಿಹಳ್ಳಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ನೂತನ ಸಂಸದರಾದ ಬಸವರಾಜ ಬೊಮ್ಮಾಯಿ ಮತ್ತು ಬಿ.ವೈ.ರಾಘವೇಂದ್ರ ಅವರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ಸಂಪದ್ಭರಿತವಾಗಿದೆ ಎಂದು ಹೇಳುತ್ತಿದೆಯಾದರೂ, ತೈಲ ಬೆಲೆಯನ್ನು ಏಕೆ ಏರಿಸುತ್ತಿದೆ ಎಂದು ಪ್ರಶ್ನಿಸಿದರು. ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಗೊಂದಲದಿಂದ ಕೂಡಿದ್ದು, ಮುಂದಿನ ಒಂದು ವರ್ಷದಲ್ಲಿ ಈ ಸರ್ಕಾರ ಅಂತ್ಯ ಕಾಣಲಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಕ್ಷೇತ್ರದ ಎಲ್ಲಾ 8 ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯೊಂದಿಗೆ ಎಲ್ಲರ ಸಹಕಾರದೊಂದಿಗೆ ಬಿಜೆಪಿಯನ್ನು ಪುನಃ ಅರಳಿಸುವ ಸಂಕಲ್ಪವನ್ನು ಮಾಡಲಾಗಿದೆ ಎಂದು ಹೇಳಿದರು.

Congratulatory ceremony for new MPs Basavaraja Bommayi and B.Y. Raghavendra

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ 15 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಹೆಚ್ಚು ಮತಗಳನ್ನು ನೀಡುವ ಮೂಲಕ ಉದ್ರಿ ಚುಕ್ತಾ ಮಾಡಿದ್ದಾರೆ. ಸತತ 2 ತಿಂಗಳು ಕಾಲ ಬಿಸಿಲು-ಗಾಳಿಯನ್ನು ಲೆಕ್ಕಿಸಿದೇ ಪಕ್ಷದ ಕಾರ್ಯಕರ್ತರು ಶ್ರಮಿಸಿ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಬಿಜೆಪಿಗೆ ಜಯದ ಮಾಲೆ ತೊಡಿಸಿದ್ದಾರೆ. ನಿಮ್ಮೆಲ್ಲರ ಸಮಸ್ಯೆಗಳಿಗೆ, ಅಭಿವೃದ್ಧಿಗೆ ಮತ್ತು ಹೋರಾಟಕ್ಕೆ ಸದಾ ಜೊತೆಯಲ್ಲಿರುತ್ತೇವೆ. ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಿ.ವೈ. ರಾಘವೇಂದ್ರರ ಸಲಹೆ ಪಡೆದು ಈ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯ ಆಯ್ಕೆ ಹೈಕಮಾಂಡ್ ಆದೇಶವಾಗಿತ್ತು. ಈ ಕ್ಷೇತ್ರ ಅತ್ಯಂತ ಪ್ರಮುಖವಾಗಿದ್ದು, ಬಿಜೆಪಿ ಪಕ್ಷದ ಸಂಘಟನೆಗೆ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸಲಿದೆ. ಶಿವಮೊಗ್ಗ ಮತ್ತು ಹಾವೇರಿ-ಗದಗ ಕ್ಷೇತ್ರದಲ್ಲಿ ಅನೇಕ ಷಡ್ಯಂತ್ರಗಳ ನಡುವೆ ಬಿಜೆಪಿ ಗೆಲವು ಸಾಧಿಸಿದೆ. ರಾಜ್ಯದ ಜನತೆ ತಮ್ಮ ಮೆಚ್ಚಿನ ಪ್ರಧಾನಿ ಮೋದಿಯವರನ್ನು ೩ನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಲು ಸಂಕಲ್ಪ ತೊಟ್ಟಿದ್ದು, ಅದು ಈಡೇರಿದೆ.

ಜಿಲ್ಲೆಯಲ್ಲಿ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿದ್ದು, ಶೀಘ್ರವೇ ಕಾಮಗಾರಿ ಮುಕ್ತಾಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಹಾಜರಿದ್ದರು.

ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚು ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ ಪಕ್ಷ ಸೋಲನ್ನು ಅನುಭವಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ಕಡೆಗಣಿಸಿರುವುದರಿಂದ ರಾಜ್ಯದ ಜನತೆ ಹತಾಶರಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಶಾಸಕರು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಂಡಿದ್ದು, ಗ್ಯಾರಂಟಿ ಯೋಜನೆಯನ್ನು ಕೈಬಿಡಲು ಒತ್ತಾಯಿಸುತ್ತಿದ್ದಾರೆ.
– ಬಸವರಾಜ ಬೊಮ್ಮಾಯಿ.
ಸಂಸದರು, ಹಾವೇರಿ-ಗದಗ.

 


Spread the love

LEAVE A REPLY

Please enter your comment!
Please enter your name here