ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ತಮ್ಮದು ನುಡಿದಂತೆ ನಡೆದ ಸರಕಾರ, ವಿಧಾನಸಭೆ ಚುನಾವಣೆಯಲ್ಲಿ ನಾವು ನೀಡಿದ ಗ್ಯಾರಂಟಿಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತ ನಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಮತ್ತು ಅವರ ಸಚಿವ ಸಂಪುಟದವರು ಹೇಳುತ್ತಿರುವ ಮಾತುಗಳೆಲ್ಲ ಸಂಪೂರ್ಣ ಸುಳ್ಳು. ಜನತೆ ಇವುಗಳನ್ನು ನಂಬಿ ಈ ಲೋಕಸಭಾ ಚುನಾವಣೆಯಲ್ಲಿಯೂ ಅವರಿಗೆ ಮತ ನೀಡಿ ಮತ್ತೆ ಮೋಸ ಹೋಗಬಾರದು ಎಂದು ರಾಜ್ಯ ಜೆಡಿಎಸ್ ಕಾರ್ಯಾಧ್ಯಕ್ಷ ಹನುಮಂತಪ್ಪ ಆಲ್ಕೋಡ್ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ನ ಗ್ಯಾರಂಟಿಗಳು ರಾಜ್ಯದ ಇನ್ನೂ ಶೇ.60ರಷ್ಟು ಜನರಿಗೆ ತಲುಪಿಲ್ಲ. ಇಂದು ಪದವಿ ಮುಗಿಸಿ ಮನೆಗೆ ಹೋಗುವವನಿಗೆ ಹಣ ಕೊಡುವಂತಿದ್ದರೆ ಈಗಾಗಲೇ ಪದವಿ ಮುಗಿಸಿ ಅದೆಷ್ಟೋ ವರ್ಷಗಳನ್ನು ಕಳೆದು ಕೆಲಸವಿಲ್ಲದೆ ಕುಳಿತಿರುವ ನಿರುದ್ಯೋಗಿ ಪದವೀಧರರಿಗೆ ಇವರೇನು ಹೇಳುತ್ತಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಈ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂಬ ವಿಷಯವನ್ನು ಮನಗಂಡು ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರು ಎನ್ಡಿಎಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಬೊಮ್ಮಾಯಿಯವರನ್ನು ಆರಿಸಿ ತಂದು ಮತ್ತೊಮ್ಮೆ ಮೋದಿ ಪ್ರಧಾನಿಯಾಗುವಂತೆ ನೋಡಿಕೊಳ್ಳಬೇಕೆಂದು ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಹನುಮಂತಪ್ಪ ಮನವಿ ಮಾಡಿದರು.
ಮಂಡ್ಯದಲ್ಲಿ ಜೆಡಿಎಸ್ನ ಕುಮಾರಸ್ವಾಮಿಯವರ ಸ್ಪರ್ಧೆಯಿಂದ ಈಗಿನ ಸಂಸದೆ ಸುಮಲತಾ ಅವರಿಗೆ ಅನ್ಯಾಯವಾದಂತಾಗಿಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿದ ಹನುಮಂತಪ್ಪ, ಇದು ಎನ್ಡಿಎ ಕೂಟ ತೆಗೆದುಕೊಂಡ ನಿರ್ಧಾರ. ಇದರಿಂದ ಸುಮಲತಾ ಅವರಿಗೆ ಯಾವುದೇ ಅನ್ಯಾಯವಾಗಿಲ್ಲ ಎಂಬುದು ನನ್ನ ಭಾವನೆ. ಅವರ ಪಕ್ಷ ಮುಂದೆ ಅವರಿಗೆ ಖಂಡಿತ ನ್ಯಾಯ ಒದಗಿಸುತ್ತದೆ ಎನ್ನುವ ವಿಶ್ವಾಸ ತಮ್ಮದು ಎಂದರು.
ಮತದಾರರು ಈ ಲೋಕಸಭಾ ಚುನಾವಣೆಯಲ್ಲಿ ತಮ್ಮ ಆಯ್ಕೆಯನ್ನು ಈಗಾಗಲೇ ಮಾಡಿಕೊಂಡಿದ್ದಾರೆ. ಅವರೆಲ್ಲರ ಆಯ್ಕೆ ರಾಜ್ಯದಲ್ಲಿ ಎನ್ಡಿಎ ಮೈತ್ರಿಕೂಟವನ್ನು ಗೆಲ್ಲಿಸುವದಾಗಿದೆ. ಹೀಗಾಗಿ ಈ ಸಾರೆ ರಾಜ್ಯದಲ್ಲಿ ಎಲ್ಲ ಸ್ಥಾನಗಳೂ ಎನ್ಡಿಎ ಮೈತ್ರಿ ಕೂಟದ ಪರವಾಗಿರಲಿವೆ ಎಂದು ಅಲ್ಕೋಡ ಹನುಮಂತಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ.ಪಂ ಸದಸ್ಯ ಕುಮಾರಸ್ವಾಮಿ ಕೋರಧಾನ್ಯಮಠ, ಧುರೀಣರಾದ ಶರಣಪ್ಪ ರೇವಡಿ, ಗದಗ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ವೀರಪ್ಪ ಜಿರ್ಲ, ತಾಲೂಕಾ ಉಪಾಧ್ಯಕ್ಷ ರಕ್ಷಿತಗೌಡ ಪಾಟೀಲ ಇನ್ನೂ ಮುಂತಾದವರಿದ್ದರು.
ಈಶ್ವರಪ್ಪ ಪಕ್ಷೇತರರಾಗಿ ಸ್ಪರ್ಧಿಸಿರುವುದು ಫಲಿತಾಂಶದ ಮೇಲೆ ಏನಾದರೂ ಪರಿಣಾಮ ಬೀರುತ್ತದೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಹನುಮಂತಪ್ಪ, ಪ್ರತಿಯೊಂದು ಪಕ್ಷವೂ ತನ್ನದೇ ಆದ ಕಾರ್ಯಕರ್ತರ ಪಡೆಯನ್ನು ಹೊಂದಿರುತ್ತದೆ. ಅಸಮಾಧಾನದಿಂದಲೋ, ಇತರೆ ಕಾರಣಗಳಿಗಾಗಿಯೋ ಪಕ್ಷ ಬಿಟ್ಟು ಹೋದವರು ಅದೆಷ್ಟು ಪೆಟ್ಟು ತಿಂದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಫಲಿತಾಂಶದ ಮೇಲೆ ಈಶ್ವರಪ್ಪನವರ ಸ್ಪರ್ಧೆ ಏನೂ ಪರಿಣಾಮ ಬೀರದೆಂದರು.