ಶಿವಮೊಗ್ಗ: ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಜೋರಾಗಿರುವ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ಭವಿಷ್ಯದ ಬಗ್ಗೆ ಭಾರೀ ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯ ಬಿಟ್ಟು ಬೇರೆ ಯಾರೇ ಸಿಎಂ ಆದರೂ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ರಾಜ್ಯ ಸರ್ಕಾರದ ವೈಫಲ್ಯವನ್ನು ಒಪ್ಪಿಕೊಂಡಿದೆ. ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ವಿಚಾರ ಗಂಭೀರವಾಗಿ ಚರ್ಚೆಯಾಗಿದೆ ಎಂದು ವಿಜಯೇಂದ್ರ ಹೇಳಿದರು.
ಸಿದ್ದರಾಮಯ್ಯ ಅನುಭವಸಂಪನ್ನ ಮುಖ್ಯಮಂತ್ರಿ ಆದರೂ ಅವರ ಆಡಳಿತದಲ್ಲಿ ರಾಜ್ಯ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಾಲ್ಮೀಕಿ ನಿಗಮ, ಮೂಡಾ ಸೇರಿದಂತೆ ಹಲವು ಹಗರಣಗಳು ಸರ್ಕಾರದ ಇಮೇಜ್ ಹಾಳು ಮಾಡಿವೆ ಎಂದು ಆರೋಪಿಸಿದರು.
ಸಿಎಂ ಬದಲಾವಣೆ ನಂತರ ಕಾಂಗ್ರೆಸ್ ಒಳಜಗಳ ಮತ್ತಷ್ಟು ತೀವ್ರವಾಗಲಿದೆ. ಹೊಸ ಮುಖ್ಯಮಂತ್ರಿ ಆಯ್ಕೆ ಸುಲಭವಾಗುವುದಿಲ್ಲ. ಪರಿಣಾಮ ಸರ್ಕಾರದ ಸ್ಥಿರತೆ ಸಂಪೂರ್ಣ ಕುಸಿಯಲಿದೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಆಡಳಿತ ಯಂತ್ರ ಕುಸಿದಿದೆ. ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್ ಸರ್ಕಾರದ ಪತನ ಖಚಿತ ಎಂದು ಹೇಳಿದ ಅವರು, ಬಿಜೆಪಿ ಮುಂದಿನ ಚುನಾವಣೆಗೆ ಸಂಘಟನೆ ಬಲಪಡಿಸಿ ಅಧಿಕಾರಕ್ಕೆ ಬರಲು ಸಜ್ಜಾಗಿದೆ ಎಂದರು.



