ವಿಜಯಸಾಕ್ಷಿ ಸುದ್ದಿ, ನರೇಗಲ್ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ, ಕಾಂಗ್ರೆಸ್‌ನ ಯಾವ ಶಾಸಕರಿಂದಲೂ ಯಾವ ಕ್ಷೇತ್ರದಲ್ಲಿಯೂ ಒಂದೇ ಒಂದು ಗುದ್ದಲಿ ಪೂಜೆ ನಡೆದಿಲ್ಲ. ಕಾಂಗ್ರೆಸ್ ಸರಕಾರ ಅಭಿವೃದ್ಧಿಯಲ್ಲಿ ಶೂನ್ಯ ಸಂಪಾದನೆ ಮಾಡಿದೆ ಎಂದು ಗದಗ ಜಿಲ್ಲಾ ಜೆಡಿಎಸ್‌ನ ಅಧ್ಯಕ್ಷ ಎಂ.ವೈ. ಮುಧೋಳ ಲೇವಡಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರಕಾರ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಚುನಾವಣಾ ನೀತಿ ಸಂಹಿತೆಯನ್ನು ಹೊರತುಪಡಿಸಿಯೂ ಎಲ್ಲಿಯೂ ಅಭಿವೃದ್ಧಿ ಕಾರ್ಯಗಳಿಗೆ ಶಂಕು ಸ್ಥಾಪನೆ ನಡೆದ ಉದಾಹರಣೆಗಳಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದ ಜನತೆಗೆ ನ್ಯಾಯ ಒದಗಿಸುವಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ. ನರೇಗಲ್ಲದಿಂದ ಕೊಪ್ಪಳಕ್ಕೆ ಹೋಗಲು ಕುಕನೂರು ಹತ್ತಿರದ ಮಾರ್ಗವಾಗಿದೆ. ಆದರೆ ನರೇಗಲ್ಲದಿಂದ ಯಲಬುರ್ಗಾ ತಾಲೂಕಿನ ಸೀಮೆಯವರೆಗೆ ಹೋಗಲು ನರೇಗಲ್ಲದ ಜನ ಪಡುತ್ತಿರುವ ಕಷ್ಟವನ್ನು ಶಾಸಕರು ಅರಿಯಬೇಕು.
ಆ ರಸ್ತೆಯನ್ನು ಸಂಪೂರ್ಣವಾಗಿ ದುರಸ್ತಿ ಮಾಡಲು ಸರಕಾರದಿಂದ, ಇಲಾಖೆಯಿಂದ ಸಾಧ್ಯವಾಗದಿದ್ದರೂ, ಕನಿಷ್ಠ ಡಾಂಬರೀಕರಣದ ತೇಪೆಯನ್ನಾದರೂ ಹಾಕಿ ಗುಂಡಿಗಳನ್ನು ಮುಚ್ಚಿಸಿದರೆ ಜನತೆ ಓಡಾಡಲು ಸುಲಭವಾಗುತ್ತದೆ.
ಸರಕಾರ ಅಲ್ಪ ಪ್ರಮಾಣದ ಸೌಲಭ್ಯಗಳನ್ನು ಜನತೆಗೆ ನೀಡಿ ತಾನೇನೋ ದೊಡ್ಡ ಸಾಧನೆ ಹೇಳಿಕೊಳ್ಳುತ್ತಿರುವುದು ನಾಚಿಕೆಯ ವಿಷಯ. ಒಂದು ವರ್ಷದಲ್ಲಿ ಸರಕಾರದ ಸಾಧನೆ ಶೂನ್ಯವಲ್ಲದೆ ಬೇರೇನೂ ಇಲ್ಲವೆಂದು ಮುಧೋಳ ಪತ್ರಿಕಾ ಪ್ರಕಟಣೆಯಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.