HomePolitics Newsಜನರ ವಿಶ್ವಾಸಕ್ಕೆ ಕಾಂಗ್ರೆಸ್ ಎಂದೂ ದ್ರೋಹ ಬಗೆದಿಲ್ಲ

ಜನರ ವಿಶ್ವಾಸಕ್ಕೆ ಕಾಂಗ್ರೆಸ್ ಎಂದೂ ದ್ರೋಹ ಬಗೆದಿಲ್ಲ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ರೋಣ : ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಕಾರ್ಡ್ ಗಳನ್ನು ಮನೆ ಮನೆಗೆ ತಲುಪಿಸಿದ್ದೆವು. ಅದೇ ರೀತಿ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳನ್ನು ಸಹ ಮನೆ ಮನೆಗೆ ತಲುಪಿಸಿದ್ದೇವೆ. ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ಇರುವ ವಿಶ್ವಾಸ ಬಹುದೊಡ್ಡದು. ಅದನ್ನು ಉಳಿಸಿಕೊಂಡಿದ್ದೇವೆ. ಅದೇ ರೀತಿ ಮುಂದೆಯೂ ಕಾಂಗ್ರೆಸ್ ಸರ್ಕಾರಕ್ಕೆ ಜನಾಶೀರ್ವಾದ ಇರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ರೋಣ ಹಾಗೂ ಗಜೇಂದ್ರಗಡ ತಾಲೂಕು ಆಡಳಿತಗಳ ಸಹಯೋಗದಲ್ಲಿ ರೋಣ ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಜರುಗಿದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಸಚಿವರು ಮಾತನಾಡಿದರು.

rona

ಪ್ರತಿ ತಿಂಗಳು ಪಂಚ ಗ್ಯಾರಂಟಿಗಳಾದ ಅನ್ನಭಾಗ್ಯ ಯೋಜನೆಯಡಿ 12 ಕೋಟಿ, ಗೃಹ ಲಕ್ಷ್ಮೀ ಯೋಜನೆಗೆ 44 ಕೋಟಿ, ಗೃಹ ಜ್ಯೋತಿಗೆ 10 ಕೋಟಿ ಹಾಗೂ ಶಕ್ತಿ ಯೋಜನೆಗೆ ಅಂದಾಜು 20 ಕೋಟಿ ಹಾಗೂ ಯುವನಿಧಿ ಸೇರಿದಂತೆ ಒಟ್ಟಾರೆ ಗದಗ ಜಿಲ್ಲೆಗೆ ಗ್ಯಾರಂಟಿ ಯೋಜನೆಯಡಿ ಪ್ರತಿ ತಿಂಗಳು 100 ಕೋಟಿ ರೂ. ಸರ್ಕಾರದ ಅನುದಾನ ಬಳಕೆಯಾಗುತ್ತಿದೆ. ಜನರ ವಿಶ್ವಾಸಕ್ಕೆ ಕಾಂಗ್ರೆಸ್ ಎಂದೂ ದ್ರೋಹ ಬಗೆದಿಲ್ಲ. ಬಡವರ, ದಲಿತರ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗದವರ ಏಳ್ಗೆಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಬಲತೆ ಸೃಷ್ಟಿಯಾಗಿದೆ. ಬಡವರ ಆರ್ಥಿಕ ಗುಣಮಟ್ಟ ಹೆಚ್ಚಾಗುತ್ತಿದೆ. ಗಜೇಂದ್ರಗಡದಿಂದ ಕಾಲಕಾಲೇಶ್ವರಕ್ಕೆ 2024ರ ವರ್ಷದಲ್ಲಿಯೇ ಕೇಬಲ್ ಕಾರ್ ಯೋಜನೆ ಆರಂಭಿಸಲಾಗುವುದು ಎಂದರು.

ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಸರ್ಕಾರ ನೀಡಿರುವ ಗ್ಯಾರಂಟಿಗಳು ಜನಸಾಮಾನ್ಯರಿಗೆ ತಲುಪಿದೆಯೇ ಎಂಬ ಖಾತರಿಗಾಗಿ ಈ ಗ್ಯಾರಂಟಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬಡ ಜನರ ಜೀವನವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವಲ್ಲಿ ಗ್ಯಾರಂಟಿಗಳ ಪಾತ್ರ ಪ್ರಧಾನವಾಗಿದ್ದು, ಮಹಿಳೆಯರು ಸ್ವಾಲಂಬಿಗಳಾಗಿ ಬದುಕಲು ಶಕ್ತಿ ಯೋಜನೆ ಉಪಯುಕ್ತವಾಗಿದೆ ಎಂದರು.

ಭ್ರಷ್ಟಾಚಾರ ರಹಿತವಾಗಿ ಗ್ಯಾರಂಟಿ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪುವುದರ ಮೂಲಕ ಗ್ಯಾರಂಟಿ ಸಮಾವೇಶ ಸಾರ್ಥಕ ಸಮಾವೇಶವಾಗಿದೆ ಎಂದು ಕೃಷ್ಣ ಭೈರೇಗೌಡ ಹೇಳಿದರು.

samarambha

ರಾಜ್ಯ ಖನಿಜ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಜಿ.ಎಸ್. ಪಾಟೀಲ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳಿಗೆ ಮಹತ್ವ ಕೊಟ್ಟು, ಎರಡು ತಿಂಗಳಲ್ಲಿ ಅನುಷ್ಠಾನಗೊಳಿಸಲಾಯಿತು. ನಿಮಗೆಲ್ಲ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಇದಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ತಮ್ಮ ಕೆಲಸದ ಒತ್ತಡದ ನಡುವೆಯೂ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರಲ್ಲದೆ, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸೇರಿದಂತೆ ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸಿದರು.

ತಾಲ್ಲೂಕಿನ ಇಟಗಿಯಲ್ಲಿ 120 ಕೋಟಿ ರೂ ವೆಚ್ಚದಲ್ಲಿ 220/10 ವಿದ್ಯುತ್ ಪರಿವರ್ತಕ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರಿಂದ ಈ ಭಾಗದ ರೈತರ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಅಲ್ಲದೇ ಗಜೇಂದ್ರಗಡದಲ್ಲಿ 6 ಕೋಟಿ ರೂ ವೆಚ್ಚದಲ್ಲಿ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ ನಿರ್ಮಾಣಕ್ಕೂ ಚಾಲನೆ ದೊರೆತಿದೆ ಎಂದರು.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಮತದಾರರಾದ ತಾವು ಬಹುಮತ ನೀಡಿದ್ದಿರಿ. ಆರು ತಿಂಗಳಲ್ಲಿ ಐದು ಗ್ಯಾರಂಟಿ ಯೋಜನೆ ಪರಿಣಾಮಕಾರಿ ಅನುಷ್ಠಾನ ಮಾಡಲಾಗಿದೆ. ಕ್ರಾಂತಿಕಾರಕ ಆರ್ಥಿಕ ಬದಲಾವಣೆಗೆ ನಮ್ಮ ಸರ್ಕಾರ ಸಾಕ್ಷಿಯಾಗಿದೆ. ಇಂತಹ ಕಾರ್ಯಕ್ರಮ ಭಾರತದಲ್ಲಿ ಎಲ್ಲಿಯೂ ಇಲ್ಲ. ದೇಶದಲ್ಲಿ ಅನ್ನಭಾಗ್ಯ ಯೋಜನೆ ಆರಂಭವಾದಾಗ 2 ರೂ.ಗೆ ಕೆ.ಜಿ ಅಕ್ಕಿ ನೀಡಲಾಗುತ್ತಿತ್ತು. ನಂತರ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಆಹಾರ ಭದ್ರತಾ ಕಾಯ್ದೆ ಜಾರಿಮಾಡಿ, ಹಸಿವು ನೀಗಿಸಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಅನ್ನ ಭಾಗ್ಯ ಜಾರಿ ಮಾಡಿ, ರಾಜ್ಯದ ಬಡವರ ಹಸಿವು ನೀಗಿಸಿ, ಹಸಿವು ಮುಕ್ತ ಕರ್ನಾಟಕ ಮಾಡಿದ್ದಾರೆ ಎಂದರು.

ವೇದಿಕೆಯಲ್ಲಿ ಕೆ.ಎಂ.ಎಫ್ ಮಾಜಿ ಅಧ್ಯಕ್ಷ ಅಸೂಟಿ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಎ.ಸಿ ಡಾ. ವೆಂಕಟೇಶ ನಾಯ್ಕ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರಶಾಂತ, ಶಶಿಕಾಂತ ಕೋಟೊಮನಿ, ತಾಲೂಕಿನ ಅಧಿಕಾರಿಗಳಾದ ರವಿ ಎ.ಎನ್, ನಾಗರಾಜ ಕೆ, ಮೋಹನ್ ಡಿ, ಕಿರಣಕುಮಾರ ಕುಲಕರ್ಣಿ, ಎಸ್.ಎಸ್. ಬೀಳಗಿ, ರಮೇಶ್ ಗೋಂದಕರ, ಬಸವರಾಜ ಬಳಗಾನೂರ, ರಾಮಪ್ಪ ಹೊಸಮನಿ ಮುಂತಾದವರಿದ್ದರು.

jana

ವಿರೋಧ ಪಕ್ಷದವರ ಅಧಿಕಾರಾವಧಿಯಲ್ಲಿ ಹಣದ್ದುಬರ ಹೆಚ್ಚಾಗಿ ಶ್ರೀಮಂತರ ತೆರಿಗೆಯನ್ನು ಕಡಿಮೆಗೊಳಿಸಿ, ಜನಸಾಮಾನ್ಯರ ಮೇಲೆ ತೆರಿಗೆಯನ್ನು ಹೆಚ್ಚು ಮಾಡಿ, ದಿನನಿತ್ಯದ ಜೀವನದ ಮೇಲೆ ಬರೆ ಎಳೆದ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಪ್ರತಿ ತಿಂಗಳು 4-5 ಸಾವಿರ ರೂ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿವಲ್ಲಿ ಗ್ಯಾರಂಟಿ ಯೋಜನೆಗಳ ಪಾತ್ರ ಹೆಚ್ಚಿದೆ.

– ಕೃಷ್ಣ ಭೈರೇಗೌಡ.

ಕಂದಾಯ ಸಚಿವರು.

ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಸರ್ಕಾರ ರಚನೆಗೆ ಆಶೀರ್ವಾದ ಮಾಡಿದ್ದೀರಿ. ಸಿಎಂ ಸಿದ್ದರಾಮಯ್ಯ ನಿಮಗೆ ನೀಡಿದ ಗ್ಯಾರಂಟಿ ಭರವಸೆ ಈಡೇರಿಸಿದ್ದಾರೆ. 2013ರಲ್ಲಿ ನೀಡಿದ 168 ಭರವಸೆಗಳನ್ನು ಸಹ ಈಡೇರಿಸಿದ್ದರು ಎಂಬುದನ್ನು ನೆನಪಿಡಬೇಕು. ಸಿ.ಎಂ ಆದ ತಕ್ಷಣ ಮೊದಲು ಗ್ಯಾರಂಟಿ ಪೋಷಣೆ ಮಾಡಿದವರು ಸಿದ್ದರಾಮಯ್ಯ. ಇಂದಿನ ವ್ಯವಸ್ಥೆಯಲ್ಲಿ ಜಿಲ್ಲಾಡಳಿತ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದೆ.

– ಜಿ.ಎಸ್. ಪಾಟೀಲ, ಶಾಸಕರು, ರೋಣ

ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ದಿವಾಳಿ ಆಗಿಲ್ಲ. ಆಗುವುದೂ ಇಲ್ಲ. ರಾಜ್ಯ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ. 3.71 ಲಕ್ಷ ಕೋಟಿ ರೂ ಆಯವ್ಯಯವನ್ನು ಸಿಎಂ ಮಾಡಿದ್ದು, ಇದರಲ್ಲಿ 52 ಸಾವಿಕ ಕೋಟಿ ರೂ ಗ್ಯಾರಂಟಿ ಯೋಜನೆಗಳಿಗೆ ಮೀಸಲಿರಿಸಿದ್ದಾರೆ. ಗ್ಯಾರಂಟಿ ಯೋಜನೆ ನಿರಂತರವಾಗಿ ಇರಲಿವೆ.

– ಬಸವರಾಜ ರಾಯರೆಡ್ಡಿ.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು, ಯಲಬುರ್ಗಾ ಶಾಸಕರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img