ವಿಜಯಸಾಕ್ಷಿ ಸುದ್ದಿ, ಗದಗ : ದೇಶದ ದೊಡ್ಡ ದೊಡ್ಡ ಕುಳಗಳಿಂದ ಚುನಾವಣಾ ಬಾಂಡ್ ಮೂಲಕ ಹಣ ಪಡೆದು, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು, ಅವರ ವಿರುದ್ಧದ ಕೇಸ್ ಹಿಂಪಡೆಯುತ್ತಿದ್ದಾರೆ. ಆ ಮೂಲಕ ಪ್ರಧಾನಿ ಮೋದಿ ಬಹುದೊಡ್ಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಕಾನೂನು, ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರಿಗಳು ಬಿಜೆಪಿ ಸೇರಿದ ನಂತರ ಅವರ ಕೇಸ್ ಖುಲಾಸೆ ಆಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಚುನಾವಣಾ ಆಯೋಗ ಈವರೆಗೆ ಬಿಜೆಪಿ ಚುನಾವಣೆ ಬಾಂಡ್ ಮೂಲಕ ಪಡೆದ ಹಣ ಮತ್ತು ಅವರ ವಿರುದ್ಧದ ತನಿಖೆಯ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರಕಾರ ಚುನಾವಣೆ ಬಾಂಡ್ ಮೂಲಕ ಹಣ ಪಡೆಯುವುದಷ್ಟೇ ಅಲ್ಲದೇ, ಶೋಷಣೆ ಮೂಲಕವೂ ಹಣ ಪಡೆದಿದೆ. ಅಧಿಕೃತವಾಗಿಯೇ ಸಾವಿರಾರು ಕೋಟಿ ರೂ. ಪಡೆದಿರುವಾಗ, ಆಂತರಿಕವಾಗಿ ಎಷ್ಟು ಸಾವಿರ ಕೋಟಿ ಹಣ ಪಡೆದಿರಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಆಪಾದಿಸಿದರು.
ಈ ಸಂದರ್ಭದಲ್ಲಿ ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ ಪಾಟೀಲ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ ಮಂದಾಲಿ, ಮುಖಂಡ ಚನ್ನಪ್ಪ ಜಗಲಿ ಉಪಸ್ಥಿತರಿದ್ದರು.
ಒಂದು ದೊಡ್ಡ ರಾಷ್ಟ್ರೀಯ ರಾಜಕೀಯ ಪಕ್ಷ (ಬಿಜೆಪಿ) ವಿರೋಧ ಪಕ್ಷದವರ ಹಳೆಯ ಕೇಸ್ ಹೊರ ತಗೆದು 1800 ಕೋಟಿ ರೂ ದಂಡ ಪಾವತಿಸಬೇಕು ಎಂದು ನೋಟಿಸ್ ನೀಡಿರುವುದು ಸರಿಯಾದ ಕ್ರಮ ಅಲ್ಲ. ಭಯ ಹುಟ್ಟಿಸುವ ನಿಮ್ಮ ಕೆಲಸಕ್ಕೆ ಯಾರೂ ಅಂಜುವುದಿಲ್ಲ. ಅವರ ನೋಟಿಸ್‌ಗೆ ಕಾಂಗ್ರೆಸ್ ಹೆದರುವುದಿಲ್ಲ. ೩೦ವರ್ಷದ ಹಿಂದಿನ ನೋಟಿಸ್ ಅನ್ನು ಚುನಾವಣೆ ಸಮಯದಲ್ಲಿ ಯಾಕೆ ನೀಡಿದರು, ಇಷ್ಟು ದಿನ ಯಾಕೆ ನೀಡಲಿಲ್ಲ? ಇದಕ್ಕೆ ತಕ್ಕ ಉತ್ತರವನ್ನು ಜನ ನೀಡುತ್ತಾರೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.