ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತುಂಗಭದ್ರಾ ನದಿ ನೀರು ಸರಬರಾಜು ಸ್ಥಗಿತಗೊಂಡಿದ್ದರಿಂದ ಪಟ್ಟಣದಲ್ಲಿ ದಿನೇ ದಿನೇ ನೀರಿನ ಸಮಸ್ಯೆ ಹೆಚ್ಚುತ್ತಿದ್ದು, ಜನರು ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದಿನ ಬೆಳಗಾದರೆ ಕೊಡ ಹಿಡಿದು ಸಾರ್ವಜನಿಕ ನಳದ ಮುಂದೆ ನಿಲ್ಲುವುದು ಸಾಮಾನ್ಯವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶನಿವಾರ ಪಟ್ಟಣದ ಹಮಾಲರ ಕಾಲೋನಿ ಜನರು ನೀರಿಗಾಗಿ ಜಲಾಗಾರದ ಮೇಲೆಯೇ ಹತ್ತಿ ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂದಿತು.
ಜಲಾಗಾರದ ಮೇಲೆ ಕೆಳಗಿನಿಂದ ಕೊಡಗಳನ್ನು ಎಸೆಯುತ್ತಾ, ಹಗ್ಗಗಳ ಸಹಾಯದಿಂದ ನೀರು ಪಡೆಯಲು ಪ್ರಯತ್ನಿಸಿದರು. ನೀರಿಗಾಗಿ ಜಲಾಗಾರದ ಮೇಲೇರಿ ನೀರು ತರಲು ಹೋದಾಗ, ಜಲಾಗಾರದಲ್ಲಿಯೂ ನೀರಿಲ್ಲದ್ದರಿಂದ ಜನರು ಆಕ್ರೋಶಗೊಂಡು ಪುರಸಭೆ ವಿರುದ್ಧ ಹರಿಹಾಯ್ದು ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದರು.
ಈ ಕುರಿತು ಇಲ್ಲಿನ ನಿವಾಸಿಗಳಾದ ಸಾವಿತ್ರಿ ಕುರಿ, ತಿಪ್ಪವ್ವ, ಕೆಂಚಮ್ಮ ಸವಣೂರ, ರೇಣವ್ವ ಕುರಹಟ್ಟಿ, ಹಾಲಮ್ಮ ಮಳ್ಳೊಳ್ಳಿ ಮುಂತಾದವರು ಮಾತನಾಡಿ, ದೀಪದ ಕೆಳಗೆ ಕತ್ತಲು ಎನ್ನುವಂತೆ ನಾವಿರುವ ಪ್ರದೇಶದಲ್ಲಿಯೇ ಜಲಾಗಾರಗಳು, ಅನೇಕ ಬೋರ್‌ವೆಲ್‌ಗಳು ಇದ್ದರೂ ವರ್ಷದುದ್ದಕ್ಕೂ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿಯಿದೆ. ದುಡಿಯುವ ವರ್ಗದ ಜನ ನಾವು, ದುಡ್ಡುಕೊಟ್ಟು ನೀರು ಹಾಕಿಸಿಕೊಳ್ಳುವ ಶಕ್ತಿ ನಮ್ಮಲ್ಲಿಲ್ಲ. ದಯವಿಟ್ಟು ಇಲ್ಲಿನ ಬಡ ಕುಟುಂಬಳಿಗೆ ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ. ನೀರು ನೀಡಿ ಇಲ್ಲವೇ ನಮ್ಮ ಕಾಲೋನಿಗೆ ಮತ ಕೇಳಲು ಬರಬೇಡಿ. ಹಲವಾರು ದಿವಸಗಳಿಂದ ನೀರಿನ ಸಮಸ್ಯೆಯ ಜತೆಗೆ ರಸ್ತೆ, ಬೆಳಕು ಸೇರಿ ಮೂಲಭೂತ ಸೌಲಭ್ಯಕ್ಕಾಗಿ ಕಂಡ ಕಂಡವರಲ್ಲಿ ಅಂಗಲಾಚುತ್ತಿದ್ದೇವೆ. ಹೀಗಾಗಿ, ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಮತದಾನ ಬಹಿಷ್ಕರಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಸೋಮವಾರ ಕೊಡ, ದನಕರುಗಳೊಂದಿಗೆ ಪುರಸಭೆಗೆ ಮುತ್ತಿಗೆ ಹಾಕುವದಾಗಿ ಎಚ್ಚರಿಕೆ ನೀಡಿದರು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ವಾಸುದೇವ ಎಂ.ಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರು ನಿವಾಸಿಗಳ ಸಮಸ್ಯೆ ಆಲಿಸಿದ ಬಳಿಕ ಮತದಾನ ಪ್ರತಿಯೊಬ್ಬರ ಆದ್ಯ ಕರ್ತವ್ಯ. ಪವಿತ್ರವಾದ ಮತದಾನದಿಂದ ಹೊರಗುಳಿಯುವುದು ಮತ್ತು ಬಹಿಷ್ಕಾರ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ನದಿಯಲ್ಲಿ ನೀರಿಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ. ಉಂಟಾಗಿರುವ ತಾಂತ್ರಿಕ ತೊಂದರೆ ಸರಿಪಡಿಸಿ ಕೂಡಲೇ ಸಾರ್ವಜನಿಕ ನಲ್ಲಿ ನೀರು ಸರಬರಾಜು ಮಾಡಲಾಗುವುದು.
ಮತದಾನ ಬಹಿಷ್ಕಾರದಂತಹ ನಿರ್ಧಾರ ಎಲ್ಲರೂ ಕೈಬಿಡಿ. ನಿಮ್ಮ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುತ್ತೇವೆ ಎಂದು ತಿಳಿ ಹೇಳಿ ಮನವೊಲಿಸಿದರು.
ಈ ವೇಳೆ ನಿವಾಸಿಗಳಾದ ಸಿದ್ದವ್ವ ಪೂಜಾರ, ದೇವಕ್ಕ ಗದ್ದಿ, ಹಾಲಮ್ಮ ಬಳ್ಳೊಳ್ಳಿ, ಶಾಂತವ್ವ ಕನವಳ್ಳಿ, ಶೇಖವ್ವ ಗದ್ದಿ, ದೇವಕ್ಕ ಗದ್ದಿ, ನೀಲಪ್ಪ ಗದ್ದಿ, ಮುದಕಪ್ಪ ಮಸೂತಿ, ಗುಡ್ಡಪ್ಪ ವಗ್ಗರ, ಬಸವರಾಜ ಕುಸಗಲ್, ಬಸಪ್ಪ ಕುರಹಟ್ಟಿ, ಬಸವರಾಜ ಕಡ್ಡಿಪೂಜಾರ, ಸಾವಿತ್ರಿ ಕುರಿ, ಸಾವಕ್ಕ ಮಳ್ಳಳ್ಳಿ ಪ್ರವೀಣ ಕೆರೂರ, ನಿಂಗಪ್ಪ ಕುರಟ್ಟಿ, ಆನಂದ ಗದ್ದಿ, ನೀಲಪ್ಪ ಬಾಲೆಹೊಸೂರ ಸೇರಿ ಹಲವರಿದ್ದರು.
ಹಮಾಲರ ಕಾಲೋನಿಯಲ್ಲಿಯೇ ಪಟ್ಟಣಕ್ಕೆ ನೀರು ಪೂರೈಸುವ 3 ಜಲಾಗಾರಗಳಿದ್ದು, ಶನಿವಾರ ಬೆಳಿಗ್ಗೆಯೇ ಮಹಿಳೆಯರು, ಪುರಷರು, ಮಕ್ಕಳು, ವಯಸ್ಸಾದವರು ನೀರಿಗಾಗಿ ಟ್ಯಾಂಕ್‌ಗಳಿಗೆ ಕೊಡಗಳ ಸಮೇತ ಮುಗಿಬಿದ್ದು, ನೀರು ತುಂಬಿಕೊಳ್ಳಲು ಹರಸಾಹಸ ಪಡುತ್ತಿದ್ದರು. ಆದರೆ, ಅದರಲ್ಲಿ ನೀರು ಸಹ ಇರದೇ ಇರುವದರಿಂದ ಹತಾಶೆಗೊಳಗಾದ ಜನರು ಪ್ರತಿಭಟನೆಗೆ ಇಳಿದು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.