ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಅತಿದೊಡ್ಡ ಸಮಗ್ರ ಸೇವಾ ಹಾಗೂ ಸೌಲಭ್ಯ ನಿರ್ವಹಣಾ ಸಂಸ್ಥೆಗಳಲ್ಲಿ ಒಂದಾದ ಭಾರತ ವಿಕಾಸ್ ಗ್ರೂಪ್ (ಬಿವಿಜಿ) ಇದೀಗ ಗದಗ ಜಿಲ್ಲೆಯಲ್ಲಿ ತನ್ನ ಪ್ರಪ್ರಥಮ ಚಿಕಿತ್ಸಾ ಕೇಂದ್ರ ಆರಂಭಿಸುತ್ತಿದ್ದು, ಜೂನ್ 7ರಂದು ನರಗುಂದ ತಾಲೂಕಿನ ವಾಸನ ಗ್ರಾಮದ ಸ್ವಯಂ ಸಂಜೀವಿನಿ ಆಶ್ರಮದಲ್ಲಿ ಬಿವಿಜಿ ಚಿಕಿತ್ಸಾ ಕೇಂದ್ರ ಲೋಕಾರ್ಪಣೆಗೊಳ್ಳಲಿದೆ ಎಂದು ಬಿವಿಜಿ ಲೈಫ್ ಸೈನ್ಸ್ ಸಂಯೋಜಕ ಸಂಜಯ ಡೋಂಗರೆ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2002ರಲ್ಲಿ ಸ್ಥಾಪನೆಯಾದ ಬಿವಿಜಿ ಸಂಸ್ಥೆ ಇಂದು ದೇಶದಾದ್ಯಂತ ಉದ್ಯೋಗ ಸೃಷ್ಟಿ, ಗುಣಮಟ್ಟದ ಸೇವೆ, ಆರೋಗ್ಯ, ಕೃಷಿ ಹಾಗೂ ಸಾಮಾಜಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರವಹಿಸಿದೆ ಎಂದರು.
ಸಂಸ್ಥೆಯ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹನುಮಂತರಾವ್ ಗಾಯ್ಕವಾಡ ಅವರು ಕೇವಲ 19ನೇ ವಯಸ್ಸಿನಲ್ಲಿ ಗ್ರಾಮೀಣ ಯುವಕರ ಸಬಲೀಕರಣಕ್ಕಾಗಿ “ಭಾರತ ವಿಕಾಸ್ ಪ್ರತಿಷ್ಠಾನ” ಆರಂಭಿಸಿದ್ದರು. 1997ರಲ್ಲಿ ಕೇವಲ 8 ಉದ್ಯೋಗಿಗಳು ಮತ್ತು ಒಂದು ಹೌಸ್‌ಕೀಪಿಂಗ್ ಒಪ್ಪಂದದೊಂದಿಗೆ ಆರಂಭವಾದ ಸಂಸ್ಥೆ ಇಂದು ದೇಶದ 20ಕ್ಕೂ ಹೆಚ್ಚು ರಾಜ್ಯಗಳ 70ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 1 ಲಕ್ಷಕ್ಕೂ ಅಧಿಕ ಸಿಬ್ಬಂದಿಯನ್ನು ಹೊಂದಿದೆ ಎಂದು ಹೇಳಿದರು.
ಬಿವಿಜಿ ಸಂಸ್ಥೆ ಜೀವ ವಿಜ್ಞಾನ ಹಾಗೂ ಆಯುರ್ವೇದ ಕ್ಷೇತ್ರದಲ್ಲೂ ಮಹತ್ವದ ಸಂಶೋಧನೆ ನಡೆಸುತ್ತಿದ್ದು, ಕ್ಯಾನ್ಸರ್, ಲಿವರ್, ಹೃದಯ ರೋಗ, ಸೋರಿಯಾಸಿಸ್ ಸೇರಿದಂತೆ 200ಕ್ಕೂ ಹೆಚ್ಚು ಔಷಧಿಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಮೊದಲ ಬಾರಿಗೆ ಪಾರಂಪರಿಕ ವೈದ್ಯ ಹನುಮಂತ ಮಳಲಿ ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡು ಗದಗ ಜಿಲ್ಲೆಯ ನರಗುಂದ ತಾಲೂಕಿನ ವಾಸನ ಗ್ರಾಮದ ಸ್ವಯಂ ಸಂಜೀವಿನಿ ಆಶ್ರಮದಲ್ಲಿ ಚಿಕಿತ್ಸಾ ಕೇಂದ್ರ ಆರಂಭಿಸಲಾಗುತ್ತಿದೆ ಎಂದರು.
ಜೂನ್ 7ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಕೇರಳದ ದಿವ್ಯಶ್ರೀ ಸಹಸ್ರಾರಯೋಗೀಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ, ಶಾಸಕರಾದ ಎಚ್.ಕೆ. ಪಾಟೀಲ, ಸಿ.ಸಿ. ಪಾಟೀಲ, ನಿವೃತ್ತ ಡಿಜಿಪಿ ಶಂಕರ ಬಿದರಿ, ಮಾಜಿ ಶಾಸಕ ಬಿ.ಆರ್. ಯಾವಗಲ್, ಬಿವಿಜಿ ಸಂಸ್ಥಾಪಕ ಹನುಮಂತರಾವ್ ಗಾಯ್ಕವಾಡ ಹಾಗೂ ಪಾರಂಪರಿಕ ವೈದ್ಯ ಹನುಮಂತ ಮಳಲಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪಾರಂಪರಿಕ ವೈದ್ಯ ಹನುಮಂತ ಮಳಲಿ, ಡಾ. ರವಿಕುಮಾರ ಹಾಗೂ ಡಾ. ವಿದ್ಯಾ ಉಪಸ್ಥಿತರಿದ್ದರು.
ಕೋಟ್
“ಪಾರಂಪರಿಕ ವೈದ್ಯಕೀಯ ಮತ್ತು ಆಧುನಿಕ ಆಯುರ್ವೇದ ಸಂಶೋಧನೆಯನ್ನು ಒಟ್ಟುಗೂಡಿಸುವ ಮಹತ್ವದ ಪ್ರಯತ್ನವೇ ಬಿವಿಜಿ ಚಿಕಿತ್ಸಾ ಕೇಂದ್ರ”
— ಸಂಜಯ ಡೋಂಗರೆ, ಬಿವಿಜಿ ಲೈಫ್ ಸೈನ್ಸ್ ಸಂಯೋಜಕರು



