ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಗಜೇಂದ್ರಗಡ ಪಟ್ಟಣದಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ನೂತನ ಸಾರಿಗೆ ಬಸ್ ಸೇವೆಗೆ ಬುಧವಾರ ಅಧಿಕೃತ ಚಾಲನೆ ನೀಡಲಾಗಿದ್ದು, ರೋಣ ವಿಧಾನಸಭಾ ಕ್ಷೇತ್ರದ ಜನರಿಗೆ ಬಹುಕಾಲದ ಕನಸಾಗಿದ್ದ ನೇರ ಸಾರಿಗೆ ಸಂಪರ್ಕ ಇದೀಗ ಸಾಕಾರಗೊಂಡಿದೆ.
ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲರ ವಿಶೇಷ ಪ್ರಯತ್ನ ಹಾಗೂ ದೂರದೃಷ್ಟಿಯ ಫಲವಾಗಿ ಆರಂಭಗೊಂಡ ಈ ಬಸ್ ಸೇವೆ, ಗ್ರಾಮೀಣ ಭಾಗದ ಜನರಿಗೆ ಶಿಕ್ಷಣ, ಉದ್ಯೋಗ, ವೈದ್ಯಕೀಯ ಹಾಗೂ ವ್ಯಾಪಾರ ಉದ್ದೇಶಗಳಿಗೆ ಬೆಂಗಳೂರಿಗೆ ಸುಲಭವಾಗಿ ಪ್ರಯಾಣಿಸಲು ನೆರವಾಗಲಿದೆ.
ನೂತನ ಬಸ್‌ಗೆ ಪೂಜೆ ಸಲ್ಲಿಸುವ ಮೂಲಕ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಚಾಲನೆ ನೀಡಿ, ರೈತರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಕ್ಷೇತ್ರದ ಜನರಿಗೆ ಈ ಬಸ್ ಸೇವೆ ಬಹಳ ಅನುಕೂಲಕರವಾಗಲಿದೆ. ಇನ್ನು ಮುಂದೆ ಗ್ರಾಮೀಣ ಭಾಗದ ಜನರು ಸುಗಮವಾಗಿ ಬೆಂಗಳೂರಿಗೆ ತೆರಳಬಹುದು ಎಂದು ಹೇಳಿದರು.
ಗಜೇಂದ್ರಗಡದಿಂದ ಹೊರಡುವ ಈ ನೂತನ ಬಸ್ ಮುಧೋಳ, ಕರಮುಡಿ, ತಿಮ್ಮಾಪುರ ಮಾರ್ಗವಾಗಿ ಮುಂಡರಗಿ, ಹಡಗಲಿ, ಹರಿಹರ, ದಾವಣಗೆರೆ ಹಾಗೂ ಚಿತ್ರದುರ್ಗ ಮೂಲಕ ಬೆಂಗಳೂರನ್ನು ತಲುಪಲಿದೆ.
ಈ ಸೇವೆಯಿಂದ ರೋಣ ಕ್ಷೇತ್ರದ ನೂರಾರು ಗ್ರಾಮಗಳ ಜನರಿಗೆ ನೇರವಾಗಿ ಬೆಂಗಳೂರು ಸಂಪರ್ಕ ದೊರೆತಂತಾಗಿದ್ದು, ವಿಶೇಷವಾಗಿ ವಿದ್ಯಾರ್ಥಿಗಳು, ಉದ್ಯೋಗಾರ್ಥಿಗಳು ಹಾಗೂ ಚಿಕಿತ್ಸೆಗಾಗಿ ರಾಜಧಾನಿಗೆ ತೆರಳುವವರಿಗೆ ದೊಡ್ಡ ಅನುಕೂಲವಾಗಲಿದೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಬಾಳಪ್ಪ ಗಂಗರಾತ್ರಿ, ಶರಣಪ್ಪ ಜೋಗಿನ, ಮಲ್ಲಿಕಾರ್ಜುನ ಇದ್ಲಿ, ಭೀಮಪ್ಪ ರಾಮಜಿ, ಅಲ್ಲಿಸಾಬ ನದಾಫ, ಗಾಳೆಪ್ಪ ಹಳ್ಳಮನವರ, ಹನುಮಪ್ಪ ಪೂಜಾರ, ಸೀತಾ ಜೋಗಿನ, ಭೀಮವ್ವ ಬನಾಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೋಟ್
“ಇದು ಶಾಸಕ ಜಿ.ಎಸ್. ಪಾಟೀಲರ ಕನಸಿನ ಕೂಸು. ಹಳ್ಳಿಗಳ ಜನರಿಗೆ ಬೆಂಗಳೂರು ಸಂಪರ್ಕ ಕಲ್ಪಿಸುವ ಮಹತ್ವದ ಸೇವೆಯಿದು.”
— ಯಲ್ಲಪ್ಪ ಎಚ್. ಬಾಬರಿ, ರೈತ ಸಂಘ ಜಿಲ್ಲಾಧ್ಯಕ್ಷ



