ಬೆಂಗಳೂರು: ಅಕ್ರಮ ಸಂಬಂಧದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭೀಕರ ಘಟನೆ ನಗರದ ಜೆಜೆ ನಗರದಲ್ಲಿ ನಡೆದಿದೆ.
ಮೃತರನ್ನು ಅಕ್ರಂ ಪಾಷಾ (43) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ಉಮರ್ ಖಾಲೀದ್ ಎಂಬ ವ್ಯಕ್ತಿಯ ಪತ್ನಿಯೊಂದಿಗೆ ಅಕ್ರಂ ಪಾಷಾ ಅಕ್ರಮ ಸಂಬಂಧ ಹೊಂದಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬುಧವಾರ ರಾತ್ರಿ ಸುಮಾರು 12:30ರ ವೇಳೆಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಅಕ್ರಂ ಪಾಷಾ ಉಮರ್ ಖಾಲೀದ್ ಅವರ ಮನೆ ಬಳಿ ಬಂದಿದ್ದ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಕೋಪಗೊಂಡ ಉಮರ್ ಖಾಲೀದ್ ಚಾಕುವಿನಿಂದ ಹಲ್ಲೆ ನಡೆಸಿದ ಪರಿಣಾಮ ಅಕ್ರಂ ಪಾಷಾ ಗಂಭೀರವಾಗಿ ಗಾಯಗೊಂಡಿದ್ದರು.
ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಉಮರ್ ಖಾಲೀದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್, ರಾತ್ರಿ ಸುಮಾರು 12:30ರ ವೇಳೆಗೆ ಹಲ್ಲೆ ನಡೆದಿರುವ ಬಗ್ಗೆ ಮಾಹಿತಿ ಬಂದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದನು ಎಂದು ತಿಳಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಸಾಗಿಸಿದರೂ ಅವರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಅಕ್ರಮ ಸಂಬಂಧವೇ ಕೊಲೆಗೆ ಪ್ರಮುಖ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಅಕ್ರಂ ಪಾಷಾ ಮತ್ತು ಆರೋಪಿ ಇಬ್ಬರೂ ಕಾರು ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೆ ಸಂಪೂರ್ಣ ತನಿಖೆಯ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.



