ವಿಜಯಸಾಕ್ಷಿ ಸುದ್ದಿ, ನರಗುಂದ : ಕಳಸಾ ಬಂಡೂರಿಗಾಗಿ ನರಗುಂದದಲ್ಲಿಯೇ ಈ ಹಿಂದೆ ಹೋರಾಟ ನಡೆಸಿದ್ದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿಯೂ ಈ ಯೋಜನೆ ಜಾರಿ ಮಾಡಲಿಲ್ಲ. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ನೂರಾರು ಕೋಟಿ ರೂ ಕಳಸಾ ಬಂಡೂರಿಗಾಗಿ ಅನುದಾನ ತೆಗೆದಿರಿಸಲಾಗಿದೆ ಎಂದು ಹೇಳಿದವರೂ ಈ ಯೋಜನೆ ಜಾರಿಯಾಗಲಿಲ್ಲ್ಲ. ಇದು ಬಿಜೆಪಿ ಪಕ್ಷವರು ಆಡಳಿತ ನಡೆಸುವ ಪರಿಯಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಬಿಜೆಪಿ ಪಕ್ಷದ ನೀತಿಗಳನ್ನು ಟೀಕೆ ಮಾಡಿದರು.
ನರಗುಂದದ ಬಸವೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಲ್ಕು ಬಾರಿ ಆಯ್ಕೆಯಾದ ಬಾಗಲಕೋಟ ಕ್ಷೇತ್ರದ ಸಂಸದ ಪಿ.ಸಿ. ಗದ್ದಿಗೌಡ್ರ ಮತ್ತು ಈ ರಾಜ್ಯದ ಬಿಜೆಪಿ ಸಂಸದರು ಒಮ್ಮೆಯೂ ಕಳಸಾ ಬಂಡೂರಿ, ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಒಂದು ಪ್ರಶ್ನೆಯನ್ನೂ ಸಂಸದ ಕಲಾಪದಲ್ಲಿ ಕೇಳಲಿಲ್ಲ. ಇದು ಜನತೆಯ ಸ್ಮರಣೆಯಲ್ಲಿದೆ ಎಂದು ಪಾಟೀಲ ವ್ಯಂಗವಾಡಿದರು.
ಇತರ ರಾಜ್ಯಗಳಿಗಿಂತ ಕೇಂದ್ರಕ್ಕೆ ಕರ್ನಾಟಕ ಹೆಚ್ಚಿನ ತೆರಿಗೆ ನೀಡುತ್ತಿದೆ. ಆದರೆ ಕೇಂದ್ರ ಸರ್ಕಾರ ಕಡಿಮೆ ಅನುದಾನ ನೀಡಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿದೆ. ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿನಲ್ಲಿರಿಸಿ ಮೋದಿ ಸಂಸತ್ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. 75 ವರ್ಷಗಳ ಅವಧಿಯಲ್ಲಿ ಇಂತಹ ಕೆಟ್ಟ ಪರಿಸ್ಥಿತಿ ದೇಶಕ್ಕೆ ಬಂದಿರಲಿಲ್ಲ. 300 ಟಿಎಂಸಿ ಕೃಷ್ಣಾ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹರಿಯುತ್ತಿದೆ. ಮೇಕೇದಾಟು ಮತ್ತು ಕಾವೇರಿ ನೀರಿನ ವಿವಾದಗಳನ್ನು ಪರಿಹರಿಸುವಲ್ಲಿ ಕೇಂದ್ರ ಸರಕಾರ ಏನನ್ನೂ ಮಾಡಿಲ್ಲ ಎಂದು ದೂರಿದರು.
ಅಭ್ಯರ್ಥಿ ಸಂಯುಕ್ತಾ ಪಾಟೀಲ ಮಾತನಾಡಿ, ಬಂಡವಾಳ ಶಾಹಿಗಳ 1.78 ಲಕ್ಷ ಸಾವಿರ ಕೋಟಿ ರೂ ಸಾಲ ಮನ್ನಾ ಮಾಡುವ ಕೇಂದ್ರ ಸರಕಾರ, ರೈತರು ತೊಂದರೆ ಅನುಭವಿಸುತ್ತಿದ್ದರೂ ಅವರ ಸಾಲ ಮನ್ನಾ ಮಾಡಿಲ್ಲ. 14 ಸಾವಿರ ಕೋಟಿ ರೂ ವಾಣಿಜ್ಯದಾರರ ಸಾಲ ಮನ್ನಾ ಕೇಂದ್ರದಿಂದ ನಡೆದಿದೆ. ಇಂತಹ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಕೇಂದ್ರದಿಂದ ದೊರೆತಿಲ್ಲ. ನಿಮ್ಮ ಮನೆ ಮಗಳು ಈ ಬಾರಿ ಬಾಗಲಕೋಟ ಕ್ಷೇತ್ರದಿಂದ ಲೋಕಸಭೆಗೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಮತ ನೀಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಮಾಜಿ ಶಾಸಕ ಬಿ.ಆರ್. ಯಾವಗಲ್ ಮಾತನಾಡಿ, ಮೋದಿ ಸರಕಾರ ರೈತರ ಕುರಿತು ಚಿಂತನೆ ಮಾಡುತ್ತಿಲ್ಲ. 15 ಲಕ್ಷ ಬಡವರಿಗಾಗಿ ಮನೆಗಳನ್ನು ನೀಡುವುದಾಗಿ ಘೋಷಿಸಿದ್ದ ಈ ಹಿಂದಿನ ಬಿಜೆಪಿ ಸರಕಾರ ಏನನ್ನೂ ಮಾಡಲಿಲ್ಲವೆಂದು ಟೀಕಿಸಿದರು.
ವೇದಿಕೆ ಮೇಲೆ ಅಪನಗೌಡ ನಾಯ್ಕರ್, ಚನ್ನಬಸಪ್ಪ ಕಂಠಿ, ಎಂ.ಎಸ್. ಪಾಟೀಲ, ಉಮಾ ದ್ಯಾವನೂರ, ಶಾರದಾ ಹಿರೇಗೌಡ್ರ, ತೇಜಾಕ್ಷಿ ಮಾನೆ, ವಿಠಲ ಶಿಂಧೆ, ಪ್ರವೀಣ ಯಾವಗಲ್, ವಿವೇಕ ಯಾವಗಲ್, ಬಾಬೂ ಹಿರೇಹೊಳಿ, ಟಿ.ಬಿ. ಸಿರಿಯಪ್ಪಗೌಡ್ರ, ಪ್ರಕಾಶ ಕರಿ, ನೀಲಕಂಠ ಅಸೂಟಿ, ಕೃಷ್ಣಪ್ಪ ಜೋಗಣ್ಣವರ, ವಿಷ್ಣು ಸಾಠೆ, ಪ್ರಕಾಶ ಹಡಗಲಿ, ರಾಮಕೃಷ್ಣ ಗೊಂಬೆ, ದ್ಯಾಮಣ್ಣ ಕಾಡಪ್ಪನವರ, ದ್ಯಾಮಣ್ಣ ಸವದತ್ತಿ, ರವಿ ಹಿರೇಮಠ, ಬಿ.ಸಿ. ಹೆಬ್ಬಳ್ಳಿ, ಎಂ.ಬಿ. ಮೆಣಸಗಿ, ರಾಜುಗೌಡ ಕೆಂಚನಗೌಡ್ರ, ಎಫ್.ವೈ. ದೊಡಮನಿ, ಎಂ.ಬಿ. ಕೊಳೇರಿ, ಪಾರಸ್ ಜೈನ್, ಸತ್ಯಜೀತ ಪಾಟೀಲ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ರಾಜು ಕಲಾಲ ನಿರ್ವಹಿಸಿದರು.
ಈ ಬಾರಿಯ ಸಂಸತ್ ಚುನಾವಣೆಯಲ್ಲಿ ಮೋದಿ ಹವಾ ಇಲ್ಲ. ಈ ಬಾರಿ ಸಂಸತ್‌ನಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಲಿದೆ. ಬಾಗಲಕೋಟ ಕ್ಷೇತ್ರದ ಸಂಸದ ಚುನಾವಣೆಗೆ ಕಾಂಗ್ರೆಸ್‌ನಿಂದ ಸಂಯುಕ್ತ ಪಾಟೀಲ ಸ್ಪರ್ಧಿಸಿದ್ದಾರೆ. ಅವರು ಆಯ್ಕೆಗೊಂಡು ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡುವಲ್ಲಿ ಹೆಚ್ಚಿನ ಶ್ರಮ ತೆಗೆದುಕೊಳ್ಳಲಿದ್ದಾರೆಂದು ಸಚಿವ ಶಿವಾನಂದ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಆರ್.ಬಿ. ತಿಮ್ಮಾಪೂರ, ಜಮಖಂಡಿ ಮಾಜಿ ಶಾಸಕ ಆನಂದ ನ್ಯಾಮಗೌಡ್ರ, ಬದಾಮಿ ಶಾಸಕ ಭೀಮಶೇನ ಚಿಮ್ಮನಕಟ್ಟಿ, ಅಜಯಕುಮಾರ ಸರನಾಯ್ಕರ್, ಎಸ್.ಆರ್. ಪಾಟೀಲ, ಡಿ.ಅರ್. ಪಾಟೀಲ, ಜೆ.ಟಿ. ಪಾಟೀಲ, ರಕ್ಷೀತಾ ಈಟಿ, ಸೌದಾಗರ, ನಂಜಯ್ಯನಮಠ ಮಾತನಾಡಿದರು. ನಿಂಗಬಸಪ್ಪ ಬಾಗದೂರ, ಪರಸಪ್ಪ ಲಮಾಣಿ, ವೆಂಕಟೇಶ ಲಮಾಣಿ ಸೇರಿದಂತೆ ಅನೇಕರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.