ವಿಜಯಸಾಕ್ಷಿ ಸುದ್ದಿ, ಧಾರವಾಡ : ಜಿಲ್ಲೆಯ ಎಲ್ಲ ವಿಧಾನಸಭಾ ಮತಕ್ಷೇತ್ರಗಳ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ನಡೆದಿದ್ದು, ಜಿಲ್ಲಾ ಚುನಾವಣಾ ಅಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮತದಾರರ ಕರಡು ಯಾದಿಯನ್ನು ಪ್ರಕಟಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಜರುಗಿಸಿ, ಮತದಾರರ ಕರಡು ಯಾದಿಯನ್ನು ವಿತರಿಸಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ 01-01-2025ನ್ನು ಅರ್ಹ ದಿನಾಂಕವೆಂದು ಪರಿಗಣಿಸಿ ವಿಧಾನಸಭಾ ಕ್ಷೇತ್ರಗಳ ಮತದಾರರ ಯಾದಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯನ್ನು ಕೈಗೊಳ್ಳುವ ಬಗ್ಗೆ ಭಾರತ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಹೊರಡಿಸಿದೆ ಎಂದರು.
ಆಯಾ ವಿಧಾನಸಭಾ ಮತಕ್ಷೇತ್ರದ ನಿಗದಿಪಡಿಸಿದ ಮತಗಟ್ಟೆಗಳಲ್ಲಿ, ಕಚೇರಿ ವೇಳೆಯಲ್ಲಿ ಅಕ್ಟೊಬರ 29ರಿಂದ ನವೆಂಬರ್ 28ರವರೆಗೆ ಮತದಾರರ ಪರಿಶೀಲನೆಗಾಗಿ ಲಭ್ಯವಿರುತ್ತದೆ. ಈ ಅವಧಿಯಲ್ಲಿ ಮತದಾರರು ಮತದಾರರ ಯಾದಿ ಪರಿಶೀಲಿಸಿ, ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷಪಣೆ ಸಲ್ಲಿಸಲು ಅವಕಾಶವಿರುತ್ತದೆ ಎಂದರು.
ನಿಗದಿತ ಕೊನೆಯ ದಿನಾಂಕದವರೆಗೆ ಸ್ವೀಕೃತವಾಗುವ ಹಕ್ಕು ಮತ್ತು ಆಕ್ಷೇಪಣೆಗಳನ್ನು ನಿಯಮಾನುಸಾರ ವಿಲೇವಾರಿ ಮಾಡಿ ಚುನಾವಣಾ ಆಯೋಗದ ನಿರ್ದೇಶನದಂತೆ ಅಂತಿಮ ಮತದಾರರ ಪಟ್ಟಿಯನ್ನು 06.01.2025ರಂದು ಪ್ರಕಟಿಸಲಾಗುವದೆಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.