ಸಂವಿಧಾನ ಜನರ ಜೀವನಾಡಿಯಾಗಿದ್ದು, ಪ್ರತಿಯೊಬ್ಬ ಭಾರತೀಯನೂ ಸಂವಿಧಾನವನ್ನು ಗೌರವಿಸಬೇಕು: ನ್ಯಾಯಾಧೀಶ ಆದಿತ್ಯ ಬಿ.ಕಲಾಲ

0
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಭಾರತ ಸಂವಿಧಾನ ಜನರನ್ನು ಸಶಕ್ತಗೊಳಿಸಿ, ಸರ್ವರಿಗೂ ಸಮಾನತೆ ಒದಗಿಸಿದೆ. ಪ್ರಜಾಪ್ರಭುತ್ವ ಆಧಾರದ ಮೇಲೆ ಲಿಖಿತ ರೂಪದಲ್ಲಿ ರಚನೆಗೊಂಡು, ಭಾರತೀಯರ ಬದುಕಿಗೆ ಹತ್ತಿರವಾಗಿರುವ ಭಾರತದ ಸಂವಿಧಾನ ಸೃಜನಶೀಲ ಮತ್ತು ಚಲನಶೀಲವಾಗಿದೆ ಎಂದು ರೋಣ-ಗಜೇಂದ್ರಗಡ ತಾಲೂಕು ಪ್ರಧಾನ ದಿವಾಣಿ ನ್ಯಾಯಾಧೀಶ ಆದಿತ್ಯ ಬಿ.ಕಲಾಲ ಹೇಳಿದರು.

Advertisement

ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘದಿಂದ ಸಂವಿಧಾನ ದಿನಾಚರಣೆಯ ಅಂಗವಾಗಿ ನಗರದ ಶ್ರೀ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಜರುಗಿದ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತದ ಸಂವಿಧಾನ ವಿಶ್ವದಲ್ಲಿಯೇ ಅತ್ಯುನ್ನತವಾಗಿದೆ. ದೇಶದ ಸಾರ್ವಭೌಮತೆ, ಪ್ರಜೆಗಳ ಹಕ್ಕುಗಳ ರಕ್ಷಣೆ ಸಂವಿಧಾನದಿಂದ ಮಾತ್ರ ಸಾಧ್ಯ. ಸಂವಿಧಾನ ಜನರ ಜೀವನಾಡಿಯಾಗಿದ್ದು, ಪ್ರತಿಯೊಬ್ಬ ಭಾರತೀಯನೂ ಸಂವಿಧಾನವನ್ನು ಗೌರವಿಸಬೇಕು.

ಅಮಾಯಕರಿಗೆ ಶಿಕ್ಷೆಗೆ ಆಗಬಾರದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನೊಂದವರಿಗೆ, ಅಬಲೆಯರಿಗೆ, ದೀನ-ದಲಿತರಿಗೆ, ಅಮಾಯಕರಿಗೆ ಪರಿಹಾರ ಒದಗಿಸುವುದೇ ಕಾನೂನಿನ ಮುಖ್ಯ ಉದ್ದೇಶವಾಗಿದೆ. ಕಾನೂನು ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕಾದ ಮಹತ್ತರ ಉದ್ದೇಶವಾಗಿದ್ದು, ಒಂದು ರಾಷ್ಟ್ರಅಭಿವೃದ್ಧಿ ಹೊಂದಬೇಕಾದರೆ ಆ ರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಕಾನೂನು ಸಾಕ್ಷರತೆಯು ಬರೀ ಸಾಕ್ಷರತೆಯಾಗದೇ ಸಾರ್ವಜನಿಕರು ಯಾವುದು ತಪ್ಪು ಯಾವುದು ಸರಿ ಎಂದು ತಿಳುವಳಿಕೆ ಹೊಂದುವಂತಾಗಬೇಕು ಎಂದರು.

ಪಿಯು ಕಾಲೇಜಿನ ಪ್ರಾಂಶುಪಾಲ ವಸಂತರಾವ್ ಗಾರಗಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ೧೯೪೯ರ ನ.೨೬ರಂದು ದೇಶಕ್ಕೆ ಸಂವಿಧಾನವನ್ನು ಸಮರ್ಪಣೆ ಮಾಡುವ ಮೂಲಕ ಸಮಗ್ರ ಅಭಿವೃದ್ದಿಗೆ ಕಾರಣೀಭೂತರಾದರು. ಈ ದಿನವನ್ನು ನಾವೆಲ್ಲರೂ ಹಬ್ಬದ ರೀತಿಯಲ್ಲಿ ಆಚರಿಸಬೇಕು. ಸಾರ್ವಭೌಮತ್ವದಿಂದ ಕೂಡಿರುವ ಭಾರತದಲ್ಲಿ ಪ್ರತಿಯೊಬ್ಬ ಸಾಮಾನ್ಯ ಮನುಷ್ಯ ದೇಶದ ಅತ್ಯುನ್ನುತ ಹುದ್ದೆ ಪಡೆಯಲು ಅವಕಾಶ ಕಲ್ಪಿಸಿರುವ ಭಾರತದ ಸಂವಿಧಾನದ ಆಸೆ ಮತ್ತು ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ದಿವಾಣಿ ನ್ಯಾಯಾಧೀಶ ಆದಿತ್ಯ ಬಿ.ಕಲಾಲ ಸಂವಿಧಾನದ ಪೀಠಿಕೆಯನ್ನು ಓದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣಪ್ಪ ಕೆ.ರೇವಡಿ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ವಕೀಲರಾದ ಬಿ.ಎಂ. ಸಜ್ಜನ, ಎ.ಎಸ್. ಅರಹುಣಸಿ, ರಾಜೇಶ್ವರಿ, ಬಾಲು ವಿ.ರಾಠೋಡ, ಸುನಿಲ ಪವಾರ, ಎಸ್.ಬಿ. ಹಿಡಿಮಠ, ಎನ್.ಎಸ್. ಬಸವರೆಡ್ಡಿ ಹಾಗೂ ಕಾಲೇಜಿನ ಸಿಬ್ಬಂದಿಗಳು ಇದ್ದರು.


Spread the love

LEAVE A REPLY

Please enter your comment!
Please enter your name here