ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಇತ್ತೀಚೆಗೆ ಸರಕಾರ ಮಣ್ಣು ಮತ್ತು ನೀರು ಸಂರಕ್ಷಣೆಯ ಸಲುವಾಗಿ ವಿವಿಧ ಇಲಾಖೆಗಳ ಮೂಲಕ ಅನುದಾನ ಒದಗಿಸುತ್ತಿದೆ. ಇವುಗಳಲ್ಲಿ ವಿಶೇಷವಾಗಿ ಅರಣ್ಯ ಪ್ರದೇಶಗಳಲ್ಲಿ ನಿರ್ಮಿಸುವ ಟ್ರೆಂಚ್ (ಗುಂಡಿ)ಗಳಲ್ಲಿ ಮಳೆಗಾಲದಲ್ಲಿ ನೀರು ಸಂಗ್ರಹವಾಗುತ್ತಿರುವದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚುತ್ತಿದೆ.
ಶಿರಹಟ್ಟಿ ತಾಲೂಕಿನ ಕೋಗನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರಕಾರಿ ಗೋಮಾಳದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ನರೇಗಾ ಯೋಜನೆಯಡಿ 2022-23ರಲ್ಲಿ ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಯಲ್ಲಿ ಸುಮಾರು 1 ಸಾವಿರ ಟ್ರೆಂಚ್‌ಗಳನ್ನು ನಿರ್ಮಿಸಲಾಗಿದ್ದು, ಇದಕ್ಕೆ 1469 ಮಾನವ ದಿನಗಳನ್ನು ಸೃಜಿಸಲಾಗಿದೆ. ಈ ಟ್ರೆಂಚ್‌ಗಳಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ನೀರು ಸಂಗ್ರಹವಾಗಿದೆ. 1 ಘಮೀಗೆ 1 ಸಾವಿರ ಲೀಟರ್ ನೀರು ಶೇಖರಣೆ ಸಾಮರ್ಥ್ಯವನ್ನು ಈ ಟ್ರೆಂಚ್‌ಗಳು ಹೊಂದಿವೆ.
ಅರಣ್ಯ ಇಲಾಖೆ ಬಹುತೇಕವಾಗಿ ಅರಣ್ಯ ಪ್ರದೇಶಗಳ ಇಳಿಜಾರಿನಲ್ಲಿ ಇಂತಹ ಟ್ರೆಂಚ್‌ಗಳನ್ನು ನಿರ್ಮಿಸುವುದರಿಂದ ಸಹಜವಾಗಿಯೇ ಮಳೆ ಬಂದ ಸಂದರ್ಭದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆಯಾಗಲಿದೆ. ಇದರಿಂದ ಅರಣ್ಯ ಪ್ರದೇಶದಲ್ಲಿರುವ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರು ಜೊತೆಗೆ ಅಂತರ್ಜಲ ಹೆಚ್ಚಳಕ್ಕೂ ಸಹಕಾರಿಯಾಗಲಿದೆ. ಸುತ್ತಮುತ್ತ ಇರುವ ಬೋರ್‌ವೆಲ್‌ಗಳ ರಿಚಾರ್ಜ್ಗೂ ಇದು ಸಹಕಾರಿಯಾಗಲಿದೆ.
ಮಣ್ಣು ಮತ್ತು ನೀರನ್ನು ಸಂರಕ್ಷಿಸುವುದಕ್ಕಾಗಿ ನಿರ್ಮಿಸಲಾಗುವ ಟ್ರೆಂಚ್‌ಗಳಲ್ಲಿ ಸಹಜವಾಗಿಯೇ ಮಳೆಗಾಲದಲ್ಲಿ ನೀರು ಶೇಖರಣೆಯಾಗುತ್ತದೆ. ಇದರಿಂದ ಸುತ್ತಮುತ್ತ ಇರುವಂತಹ ಪ್ರದೇಶವು ತೇವಾಂಶ ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ. ನಂತರ ಈ ಪ್ರದೇಶದಲ್ಲಿ ಪ್ಲಾಂಟೇಶನ್ ಮಾಡಲು ಸಹ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇದರಿಂದ ಹೆಚ್ಚು ಹಸಿರು ಪ್ರದೇಶವನ್ನು ನಿರ್ಮಿಸುವ ಗುರಿ ಹೊಂದಿದೆ.
ಇತ್ತೀಚೆಗೆ ಬೇಸಿಗೆ ಕಾಲದಲ್ಲೂ ಸಹ ರಸ್ತೆ ಬದಿ ನೆಟ್ಟ ಗಿಡಗಳಿಗೆ ಬಾಡಿಗೆ ಟ್ರಾಕ್ಟರ್ ಮತ್ತು ಟ್ಯಾಂಕರ್‌ಗಳನ್ನು ಬಳಸಿ ಗಿಡಗಳಿಗೆ ನೀರು ಹಾಕುವ ಕೆಲಸವನ್ನು ಶಿರಹಟ್ಟಿಯ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ.
ಟ್ರೆಂಚ್‌ಗಳು ನಿರ್ಮಾಣವಾದ ನಂತರ ಅವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾದ ಬಳಿಕ ಅವುಗಳನ್ನು ಸಮರ್ಪಕ ನಿರ್ವಹಣೆಯನ್ನು ಸಹ ಇಲಾಖೆಯ ಅಧಿಕಾರಿಗಳು ನಿಭಾಯಿಸಬೇಕು. ಅಂದಾಗ ಮಾತ್ರ ಸರಕಾರದ ಉದ್ದೇಶ ನೀರು ಮತ್ತು ಮಣ್ಣು ಸಂರಕ್ಷಣೆಯಾಗಲಿದೆ. ಈ ನಿಟ್ಟಿನಲ್ಲಿ ಇವುಗಳ ನಿರ್ವಹಣೆಯೂ ಸಹ ಅಷ್ಟೇ ಮುಖ್ಯವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೌಶಿಕ್ ದಳವಾಯಿ, ಸರಕಾರಿ ಗೋಮಾಳ ಜಾಗೆಯಲ್ಲಿ ನರೇಗಾದ ಮಣ್ಣು ಮತ್ತು ನೀರು ಸಂರಕ್ಷಣೆ ಯೋಜನೆಯಡಿ 1 ಸಾವಿರ ಟ್ರೆಂಚ್‌ಗಳನ್ನು ನಿರ್ಮಿಸಲಾಗಿದ್ದು, ಇತ್ತೀಚೆಗೆ ಸುರಿದ ಮಳೆಯಿಂದ ಟ್ರೆಂಚ್‌ಗಳಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಶೇಖರಣೆಯಾಗಿದೆ. ಬೇಸಿಗೆಯಲ್ಲೂ ಸಹ ರಸ್ತೆ ಬದಿ ನೆಡಲಾಗಿದ್ದ ಗಿಡಗಳಿಗೆ ಟ್ಯಾಂಕರ್ ಮೂಲಕ ನೀರು ಹಾಯಿಸಲಾಗಿದೆ ಎಂದರು.