ಮಕ್ಕಳ ಹಕ್ಕುಗಳ ರಕ್ಷಣೆಗೆ ಬದ್ಧರಾಗಿ : ಶೇಖರಗೌಡ ರಾಮತ್ನಾಳ

0
Consultation with stakeholders on child protection arrangements
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಪ್ರತಿ ಕುಟುಂಬದವರು ತಮ್ಮ ಕುಟುಂಬದ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಅವರ ಹಕ್ಕುಗಳ ರಕ್ಷಣೆಗೆ ಬದ್ಧರಾಗಿರಬೇಕು. ರಾಜ್ಯ ಹಾಗೂ ಕೇಂದ್ರ ಸರಕಾರ ಸೇರಿದಂತೆ ವಿವಿಧ ಇಲಾಖೆ, ನಿಗಮಗಳಿಂದ ವಿವಿಧ ಸಹಾಯಧನ, ಸೌಲಭ್ಯ ಪಡೆಯುವ ಪ್ರತಿ ಫಲಾನುಭವಿಯಿಂದ ಮಕ್ಕಳ ರಕ್ಷಣೆ ಮತ್ತು ಸುರಕ್ಷತೆ ಕುರಿತು ಬದ್ಧತಾ ಘೋಷಣೆಯ ಪ್ರಮಾಣ ಪತ್ರ ಪಡೆದು, ಅವರನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.

Advertisement

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆ ಕುರಿತು ಭಾಗಿದಾರರೊಂದಿಗೆ ಸಮಾಲೋಚನೆ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಅವರು ಮಾತನಾಡಿದರು.

ಹಲವು ಮಕ್ಕಳ ಪ್ರಕರಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಇಂದಿನ ಮಕ್ಕಳಿಗೆ ಅವರ ಕುಟುಂಬದಲ್ಲಿಯೇ ರಕ್ಷಣೆ ಇಲ್ಲದಿರುವ ಮನೋಭಾವವಿದೆ. ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಪರಿಚಯಸ್ಥರಿಂದಲೇ ಮಕ್ಕಳ ಮೇಲೆ ದೌರ್ಜನ್ಯವಾಗಿರುವ ಪ್ರಕರಣಗಳಿವೆ. ಸರಕಾರ, ಸಂಸ್ಥೆ, ಆಯೋಗ, ಪೊಲೀಸ್ ಸೇರಿ ಎಲ್ಲ ಇಲಾಖೆಗಳು ಕಾನೂನಾತ್ಮಕವಾಗಿ ಮಕ್ಕಳ ರಕ್ಷಣೆ ಹಾಗೂ ಅವರಿಗೆ ಉತ್ತಮ ವಾತಾವರಣ ಕಲ್ಪಿಸಲು ಶ್ರಮಿಸಿದರೂ ಯಶ ಕಾಣುತ್ತಿಲ್ಲ. ಹೆಚ್ಚುತ್ತಿರುವ ಮಕ್ಕಳ ಪ್ರಕರಣಗಳು ಇದಕ್ಕೆ ಸಾಕ್ಷಿ ಎಂದು ಅವರು ಹೇಳಿದರು.

ಮಕ್ಕಳ ರಕ್ಷಣೆಯಲ್ಲಿ ತಂದೆ-ತಾಯಿ, ಪಾಲಕರ ಪಾತ್ರ ಮಹತ್ವದ್ದಾಗಿದ್ದು, ಅವರಿಂದ ಬದ್ಧತಾ ಪ್ರಮಾಣಪತ್ರ ಪಡೆಯುವ ಮೂಲಕ ಅವರನ್ನು ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜವಾಬ್ದಾರರನ್ನಾಗಿ ಮಾಡಬೇಕೆಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಗಳಲ್ಲಿ ಮಕ್ಕಳ ಗ್ರಾಮ ಸಭೆಗಳನ್ನು ಸಂಘಟಿಸಲಾಗುತ್ತಿದೆ. ಗ್ರಂಥಾಲಯ ಸೇರಿ ವಿಶೇಷ ಸೌಲಭ್ಯಗಳನ್ನು ಮಕ್ಕಳಿಗೆ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀತಾ ವಾಡಕರ ಸ್ವಾಗತಿಸಿ, ಸಭೆ ನಿರ್ವಹಿಸಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭಾ ಪಿ., ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಟೀಲ ಶಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ., ಕೃಷಿ ಇಲಾಖೆ ಉಪನಿರ್ದೇಶಕಿ ಜಯಶ್ರೀ ಹಿರೇಮಠ, ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ, ಶಿಕ್ಷಣ ಇಲಾಖೆ ಡಿವೈಪಿಸಿ ಗಿರೀಶ ಮಠಪತಿ, ಕಾರ್ಮಿಕ ಇಲಾಖೆ ಅಧಿಕಾರಿ ಮಾರಿಕಾಂಬಾ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಜಗದೀಶ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮಕ್ಕಳ ರಕ್ಷಣಾ ಕ್ಷೇತ್ರದಲ್ಲಿ ಕಾರ್ಯ ಮಾಡುತ್ತಿರುವ ವಿವಿಧ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ, ತಮ್ಮ ಇಲಾಖೆಗಳ ಪ್ರಗತಿ ವರದಿ ಸಲ್ಲಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್. ದೊಡ್ಡಮನಿ ಮಾತನಾಡಿ, ಮಕ್ಕಳ ಹಕ್ಕುಗಳ ಜಾಗೃತಿ ಹಾಗೂ ಅವರಲ್ಲಿ ಅರಿವು ಮೂಡಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here