HomeGadag Newsಒಳ ಮೀಸಲಾತಿ ತೀರ್ಪು ಬರುವವರೆಗೆ ಹಳೆಯ ವ್ಯವಸ್ಥೆ ಮುಂದುವರಿಸಿ: ಸಿಎಂಗೆ ಮನವಿ

ಒಳ ಮೀಸಲಾತಿ ತೀರ್ಪು ಬರುವವರೆಗೆ ಹಳೆಯ ವ್ಯವಸ್ಥೆ ಮುಂದುವರಿಸಿ: ಸಿಎಂಗೆ ಮನವಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣ ಹಾಗೂ ಶೇಕಡಾವಾರು ಹಂಚಿಕೆಗೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಹಿನ್ನೆಲೆಯಲ್ಲಿ, ಅಂತಿಮ ತೀರ್ಪು ಪ್ರಕಟವಾಗುವವರೆಗೆ ಹಳೆಯ ಮೀಸಲಾತಿ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಬಂಜಾರ, ಭೋವಿ, ಕೊರಚ ಹಾಗೂ ಕೊರಮ (ಕೊಲಂಬೆ) ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಗದಗಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಸಂಘದ ಮುಖಂಡರು, ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಯಾವುದೇ ಹೊಸ ವರ್ಗೀಕರಣವನ್ನು ಜಾರಿಗೊಳಿಸದೆ ಹಿಂದಿನ ಮೀಸಲಾತಿ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ 2025ರ ಆಗಸ್ಟ್ 19ರಿಂದ 2026ರ ಮೇ 13ರವರೆಗೆ ವಿವಿಧ ಹಂತಗಳಲ್ಲಿ ನಿರ್ಣಯಗಳನ್ನು ಕೈಗೊಂಡಿದೆ. ಆದರೆ, ಒಳ ಮೀಸಲಾತಿಯ ವರ್ಗೀಕರಣ ಹಾಗೂ ಶೇಕಡಾವಾರು ಹಂಚಿಕೆಯನ್ನು ಪ್ರಶ್ನಿಸಿ ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಇನ್ನೂ ಅಂತಿಮ ತೀರ್ಪು ಪ್ರಕಟವಾಗಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ವರ್ಗೀಕರಣಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ಅಂತಿಮವಾಗಿ ಇತ್ಯರ್ಥವಾಗುವವರೆಗೆ ಹಳೆಯ ಮೀಸಲಾತಿ ವ್ಯವಸ್ಥೆಯನ್ನು ಮುಂದುವರಿಸುವ ಕುರಿತು ಸರ್ಕಾರವು 2026ರ ಫೆಬ್ರವರಿ 27ರಂದು ನಿರ್ಣಯ ಪ್ರಕಟಿಸಿತ್ತು ಎಂದೂ ಮುಖಂಡರು ಗಮನ ಸೆಳೆದರು.

ಪ್ರಸ್ತುತ WP No. 23399/2026 ಪ್ರಕರಣದಲ್ಲಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳದಂತೆ ಮಧ್ಯಂತರ ತಡೆ ಆದೇಶ ಜಾರಿಯಲ್ಲಿರುವುದರಿಂದ, ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಹಳೆಯ ಮೀಸಲಾತಿ ವ್ಯವಸ್ಥೆಯನ್ನೇ ಮುಂದುವರಿಸುವುದು ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಹಿತದೃಷ್ಟಿಯಿಂದ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಇದೇ ತಿಂಗಳ 13ರಂದು ಆರಂಭವಾಗಲಿರುವ ಕರ್ನಾಟಕ ವಿಧಾನಸಭೆಯ ಮಳೆಗಾಲದ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಬಂಜಾರ, ಭೋವಿ, ಕೊರಚ ಹಾಗೂ ಕೊರಮ (ಕೊಲಂಬೆ) ಸಮುದಾಯಗಳ ಪರವಾಗಿ ಸದನದಲ್ಲಿ ಧ್ವನಿ ಎತ್ತಬೇಕು ಎಂದು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತೂಚ ಚೌಹಾಣ್, ಗುರು ಲಮಾಣಿ, ತುಕಾರಾಮ ಲಮಾಣಿ, ಸಂತೋಷ್ ರಾಥೋಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮನವಿ ಸಲ್ಲಿಕೆಗೆ ಅಖಿಲ ಕರ್ನಾಟಕ ಬಂಜಾರ, ಭೋವಿ, ಕೊರಚ ಹಾಗೂ ಕೊರಮ ಕ್ಷೇಮಾಭಿವೃದ್ಧಿ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಪರಮೇಶ ನಾಯಕ ನೇತೃತ್ವ ವಹಿಸಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img