ಬೆಂಗಳೂರು: “ಹಣ ಅಂದರೆ ಹೆಣ ಕೂಡ ಬಾಯಿ ಬಿಡುತ್ತೆ” ಎನ್ನುವ ಮಾತು ಮತ್ತೊಮ್ಮೆ ಸತ್ಯವಾಗಿದೆ.
ಡಬಲ್–ತ್ರಿಬಲ್ ಹಣ ಸಿಗುತ್ತದೆ ಎಂಬ ಆಮಿಷಕ್ಕೆ ಒಳಗಾದ ಗುತ್ತಿಗೆದಾರನೊಬ್ಬ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ, ಹಣ ಡಬ್ಲಿಂಗ್ ಮಾಡುವ ನೆಪದಲ್ಲಿ ಗುತ್ತಿಗೆದಾರ ರಮೇಶ್ ಅವರಿಂದ ಸುಮಾರು ₹28.60 ಲಕ್ಷ ವಂಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುಗಿರಿ ಮೂಲದ ವಿಜಯ್, ಕೆರೆಗುಡ್ಡದಹಳ್ಳಿಯ ಕೃಷ್ಣ ಸಿಂಗ್ ಹಾಗೂ ಚಾಲಕ ನವೀನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು “ಬಾರಿಶ್ ಹಣ” ಎಂಬ ಹೆಸರಿನಲ್ಲಿ ಕಪ್ಪು ಹಣವನ್ನು 90 ದಿನಗಳಲ್ಲಿ ಖರ್ಚು ಮಾಡಬೇಕು, ನೀವು ಒಂದು ಲಕ್ಷ ಕೊಟ್ಟರೆ ಮೂರು ಲಕ್ಷ ನೀಡುತ್ತೇವೆ ಎಂದು ನಂಬಿಸಿ, ಗುತ್ತಿಗೆದಾರನನ್ನು ಮೋಸ ಮಾಡಿದ್ದಾರೆ. ಇವರ ಮಾತು ನಂಬಿದ ರಮೇಶ್ ಅವರು 8ನೇ ಮೈಲಿ ಬಳಿ ₹28 ಲಕ್ಷಕ್ಕೂ ಅಧಿಕ ಹಣವನ್ನು ನೀಡಿದ್ದರು.
ಹಣ ಪರಿಶೀಲನೆ ಮಾಡಿ ಬರುತ್ತೇವೆ ಎಂದು ಹೇಳಿದ ಆರೋಪಿಗಳು, ಹಣ ಸಮೇತ ಪರಾರಿಯಾಗಿದ್ದರು. ನಂತರ ಮೋಸವಾಗಿರುವುದು ತಿಳಿದ ರಮೇಶ್, ತಕ್ಷಣವೇ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ.
ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿ ಒಟ್ಟು ₹40 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. ಇದೇ ಮಾದರಿಯ ವಂಚನೆಗೆ ಮತ್ತೊಬ್ಬ ವ್ಯಕ್ತಿಯೂ ₹18 ಲಕ್ಷ ಕಳೆದುಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, “ಡಬಲ್ ಅಥವಾ ತ್ರಿಬಲ್ ಹಣ ಸಿಗುತ್ತದೆ” ಎಂಬ ಆಮಿಷಕ್ಕೆ ಒಳಗಾಗಬಾರದು. ಅತಿಯಾದ ಲಾಭದ ಆಸೆ ಇಟ್ಟರೆ ಇಂತಹ ವಂಚನೆಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.



