ಬೆಂಗಳೂರು: ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ್ ಜೀವ ಕಳೆದುಕೊಂಡ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇದರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ತಳುಕು ಹಾಕಿಕೊಂಡಿದ್ದು ವಿರೋಧ ಪಕ್ಷ ರಾಜೀನಾಮೆಗೆ ಆಗ್ರಹಿಸುತ್ತಿದೆ. ಇದರ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಅವರು ದಾಖಲಾತಿ ಇಟ್ಟುಕೊಂಡು ಹೋರಾಟ ಮಾಡಬೇಕು. ಸಚಿನ್ ಡೆತ್ ನೋಟ್ ಬರೆದಿದ್ದಾನೆ. ಅದರಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಇಲ್ಲ. ಯಾಕೆ ಅವರು ರಾಜೀನಾಮೆ ಕೊಡಬೇಕು. ಅವರ ಪಾತ್ರ ಏನು ಇಲ್ಲ, ಹಾಗಾದರೆ ಯಾಕೆ ರಾಜೀನಾಮೆ ಕೊಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಈಶ್ವರಪ್ಪ ಕೇಸ್‌ನಲ್ಲಿ ಡೆತ್ ನೋಟ್‌ನಲ್ಲಿ ಈಶ್ವರಪ್ಪ ಹೆಸರು ಇತ್ತು. ಈ ಕೇಸ್‌ನಲ್ಲಿ ಡೆತ್ ನೋಟ್ ನಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಇದೆಯಾ? ಪ್ರಿಯಾಂಕ್ ಖರ್ಗೆ ಹೆಸರು ಎಲ್ಲೂ ಕೂಡಾ ಇಲ್ಲ. ಪ್ರಿಯಾಂಕ್ ಖರ್ಗೆ ಈಗಾಗಲೇ ಹೇಳಿದ್ದಾರೆ ಯಾವುದೇ ತನಿಖೆಗೆ ಸಿದ್ದ ಅಂತ. ಈಗ ನಾವು ದೂರಿನ ಮೇಲೆ CODಗೆ ಪ್ರಕರಣ ಕೊಟ್ಟಿದ್ದೇವೆ. COD ವರದಿ ಕೊಡಲಿ. ವರದಿ ಕೊಟ್ಟ ಮೇಲೆ ಪ್ರಿಯಾಂಕ್ ಖರ್ಗೆ ತಪ್ಪು ಮಾಡಿದ್ದಾರೆ ಎಂದು ಗೊತ್ತಾಗಬೇಕಲ್ಲವಾ? ಸದ್ಯಕ್ಕೆ ಅವರ ಮೇಲೆ ಯಾವುದೇ ದಾಖಲೆ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.