ತಂಪಾದ ಇಳೆ: ಕೃಷಿ ಚಟುವಟಿಕೆಗಳಿಗೆ ಕಳೆ

0
Cool yarrow: A weed for agricultural activities
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕಳೆದ ವರ್ಷದ ಮುಂಗಾರು ಮತ್ತು ಹಿಂಗಾರು ಮಳೆಯಾಗದೇ ಬರಗಾಲದ ಬೇಗುದಿಯಲ್ಲಿ ಬಳಲುತ್ತಿದ್ದ ಜನತೆಗೆ ಸೋಮವಾರ ತಡರಾತ್ರಿ 2 ಗಂಟೆಗಳ ಕಾಲ ಸುರಿದ ಉತ್ತಮ ಮಳೆ ಮಂದಹಾಸ ಮೂಡಿಸಿದೆ.

ಬೇಸಿಗೆಯುದ್ದಕ್ಕೂ ಜನಜಾನುವಾರುಗಳು ಅನುಭವಿಸುತ್ತಿದ್ದ ನೀರಿನ ಬವಣೆ, ವಿಪರೀತ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನತೆ, ಪಶು-ಪಕ್ಷಿ, ಪ್ರಾಣಿಗಳೂ ಸಹ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ರಾತ್ರಿ ಗುಡುಗು-ಸಿಡಿಲು ಗಾಳಿಯೊಂದಿಗೆ ಅಬ್ಬರಿಸಿದ ಮಳೆಯಿಂದ ಕೆರೆ, ಹಳ್ಳ-ಕೊಳ್ಳ ಮತ್ತು ಜಮೀನಿನ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿವೆ. ಹಲವು ಕಡೆ ಬದುಗಳು ಕಿತ್ತು ಜಮೀನು ಕೊಚ್ಚಿದೆ. ಪಟ್ಟಣದಲ್ಲಿ ಚರಂಡಿಗಳು ತುಂಬಿ ರಸ್ತೆಯ ಮೇಲೆ ಹರಿದಿವೆ. ಕೆಲವಡೆ ಮರ, ಮನೆ ಬಿದ್ದಿರುವ ಘಟನೆಳಾದರೂ ಯಾವುದೇ ಹಾನಿ ಸಂಭವಿಸಿದ ವರದಿಯಾಗಿಲ್ಲ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಸೋಮವಾರ ರಾತ್ರಿ ಲಕ್ಷ್ಮೇಶ್ವರ ತಾಲೂಕಿನಲ್ಲಿ 67.0 ಮಿ.ಮೀ ಮಳೆಯಾಗಿದೆ.

ತಾಲೂಕಿನ ಯಳವತ್ತಿ, ಯತ್ನಳ್ಳಿ, ಮಾಗಡಿ, ಗೊಜನೂರ, ಅಕ್ಕಿಗುಂದ, ಆದ್ರಳ್ಳಿ, ಬಡ್ನಿ, ಬಟ್ಟೂರ, ಸೂರಣಗಿ, ಹುಲ್ಲೂರ, ಬಾಲೆಹೊಸೂರ, ಶಿಗ್ಲಿ, ದೊಡ್ಡೂರ, ರಾಮಗೇರಿ, ಬಸಾಪುರ, ಅಡರಕಟ್ಟಿ ಸೇರಿ ಎಲ್ಲೆಡೆ ಉತ್ತಮ ಮಳೆಯಾಗಿದೆ. ಲಕ್ಷ್ಮೇಶ್ವರದಲ್ಲಿ ಒಳಚರಂಡಿ ಕಾಮಗಾರಿ, ನಗರೋತ್ಥಾನ ಕಾಮಗಾರಿಯ ಬಹುತೇಕ ರಸ್ತೆಗಳು ಹಾಳಾಗಿದ್ದು, ಮಳೆಯಿಂದ ರಸ್ತೆಗಳ ನೈಜಸ್ಥಿತಿ ಅನಾವರಣಗೊಂಡಿದೆ.

ಮುಂಗಾರು ಪೂರ್ವ ಮಳೆಯೇ ಆಗದ್ದರಿಂದ ಬಿತ್ತನೆಗೆ ಭೂಮಿ ಸಿದ್ದಪಡಿಸಲಾಗದೇ ರೈತರು ಚಡಪಡಿಸುತ್ತಿದ್ದ ಸಂದರ್ಭದಲ್ಲಿ ಸೋಮವಾರ ರಾತ್ರಿ ಸುರಿದ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಮುಂಗಾರಿನ ಕೃಷಿ ಚಟುವಟಿಕೆಗಳಿಗೆ ಅನಕೂಲಕರ ವಾತಾವರಣ ನಿರ್ಮಾಣವಾಗಿದೆ. ಬರಿದಾಗಿರುವ ಕೆರೆ, ಕೃಷಿಹೊಂಡ, ಹಳ್ಳ ಮತ್ತು ಬದು-ಬಾಂದಾರಗಳಲ್ಲಿ ನೀರು ಸಂಗ್ರಹವಾಗುವಂತೆ ಇನ್ನಷ್ಟು ಮಳೆಯಾದರೆ, ಅಂತರ್ಜಲ ಮಟ್ಟ ಹೆಚ್ಚಳ, ಉತ್ತಮ ಬೆಳೆಯ ನಿರೀಕ್ಷೆ ಮತ್ತು ವರ್ಷಪೂರ್ತಿ ನೀರಿಗಾಗಿ ಪರಿತಪಿಸದೇ ನೆಮ್ಮದಿಯ ನಿಟ್ಟುಸಿರುವ ಬಿಡಬಹುದು ಎಂಬುದು ರೈತ ಸಮುದಾಯದ ಅಭಿಪ್ರಾಯ.


Spread the love

LEAVE A REPLY

Please enter your comment!
Please enter your name here