ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮೂಡುಗೂರು ಗ್ರಾಮದಲ್ಲಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಹಣ ಕಳ್ಳತನ ಪ್ರಕರಣದಲ್ಲಿ ದೂರುದಾರನೇ ಆರೋಪಿ ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಮೂರ್ತಿಯೇ ಈ ಕಳ್ಳತನದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 17ರಂದು ಕಚೇರಿಯ ಕಬೋರ್ಡ್ ಅನ್ನು ಕಬ್ಬಿಣದ ರಾಡ್‌ನಿಂದ ಒಡೆದು 14 ಲಕ್ಷ 12 ಸಾವಿರ ರೂ. ಹಣ ಕಳ್ಳತನ ಮಾಡಲಾಗಿತ್ತು.
ಪ್ರಕರಣದ ತನಿಖೆ ವೇಳೆ ಚಂದ್ರಶೇಖರ ಮೂರ್ತಿಯೇ ಕೃತ್ಯ ನಡೆಸಿರುವುದು ಬಹಿರಂಗವಾಗಿದ್ದು, ಬಂಧಿತನಿಂದ ಇದುವರೆಗೆ 8 ಲಕ್ಷ ರೂ. ಹಣವನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.



