ಸಂಭ್ರಮದ ಪುಲಿಗೆರೆ ಉತ್ಸವಕ್ಕೆ ಕ್ಷಣಗಣನೆ

0
puligere
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಮತ್ತೊಮ್ಮೆ `ಪುಲಿಗೆರೆ ಉತ್ಸವ’ ಸಾಂಸ್ಕೃತಿಕ ಹಬ್ಬದ ವಿಜೃಂಭಣೆಗೆ ವೇದಿಕೆ ಸಜ್ಜುಗೊಳ್ಳುತ್ತಿದೆ. ಲಕ್ಷ್ಮೇಶ್ವರದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಸಹಕಾರ ಹಾಗೂ ಭಾರತೀಯ ವಿದ್ಯಾಭವನ ಸಹಯೋಗದಲ್ಲಿ ನಡೆಯುತ್ತಿರುವ 7ನೇ ಆವೃತ್ತಿಯ `ಪುಲಿಗೆರೆ ಉತ್ಸವ’ ಏ.19, 20 ಮತ್ತು 21ರಂದು ಜರುಗಲಿದೆ. ನಾಡಿನ ಪ್ರಸಿದ್ಧ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

Advertisement

utsav

3 ದಿನಗಳ ಕಾಲ ನಡೆಯುವ ನೃತ್ಯ-ಸಂಗೀತ-ಚಿತ್ರಕಲಾ ಸಂಭ್ರಮವನ್ನು ಸಾಂಸ್ಕೃತಿಕ ಪರಂಪರೆಯ ಉತ್ಥಾನದ ಧ್ಯೇಯದಿಂದ ರೂಪಿಸಲಾಗಿದ್ದು, ಉತ್ಸವದಲ್ಲಿ ಸುಮಾರು 100ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಪ್ರಸಿದ್ಧ ಕಲಾ ತಂಡದವರ ವಿವಿಧ ವಾದ್ಯ ವೈಭವಗಳೊಂದಿಗೆ ಅಲಂಕೃತ ಶ್ರೀ ಸೋಮೇಶ್ವರ ದೇವರ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗಲಿದೆ.

ಪುಲಿಗೆರೆ ಉತ್ಸವದಲ್ಲಿ ಮೊದಲ ದಿನ ಏ.19ರಂದು ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ಕೆ.ರಾವ್ ಮತ್ತು ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸ್ಥಳೀಯ ಹಾಗೂ ಸಂಸ್ಥೆಯ ಅನೇಕ ಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಶುಕ್ರವಾರ ಬೆಳಿಗ್ಗೆ 6.10ಕ್ಕೆ ಉದಯ ರಾಗ-1ರಲ್ಲಿ ಖ್ಯಾತ ಕಲಾವಿದ ಸರ್ಪರಾಜ್ ಖಾನ್ ಇವರಿಂದ ಸಾರಂಗಿ ವಾದನ, ಬೆಳಿಗ್ಗೆ 7ಕ್ಕೆ ಖ್ಯಾತ ಹಿಂದುಸ್ಥಾನಿ ಸಂಗೀತ ಕಲಾವಿದೆ ರೇಷ್ಮಾ ಭಟ್ ಅವರಿಂದ ಹಿಂದೂಸ್ಥಾನಿ ಗಾಯನ ಜರುಗುವುದು. ಸಂಜೆ 4ಕ್ಕೆ ಅಲಂಕೃತ ಶ್ರೀ ಸೋಮೇಶ್ವರ ದೇವರ ಪಲ್ಲಕ್ಕಿ ಉತ್ಸವ ಜರುಗಲಿದೆ.

ಸಂಜೆಯ ಕಾರ್ಯಕ್ರಮದಲ್ಲಿ ಇನ್ಪೋಸಿಸ್ ಪ್ರತಿಷ್ಠಾನದ ಸಿಎಸ್‌ಆರ್ ವಿಭಾಗದ ವ್ಯವಸ್ಥಾಪಕ ಪ್ರಶಾಂತ ಹೆಗಡೆ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸಂಜೆ 6ಕ್ಕೆ ಸಿದ್ದಾಪುರದ ಕೊಳಗಿ ಕೇಶವ ಹೆಗಡೆ ಮತ್ತು ತಂಡದವರಿಂದ ಯಕ್ಷಗಾನ ಜರುಗಲಿದೆ. ಸಂಜೆ 7ಕ್ಕೆ ಹಿರಿಯ ಗಾಯಕ ಡಾ.ಅಶೋಕ ಹುಗ್ಗಣ್ಣವರ ಅವರಿಂದ ಹಿಂದೂಸ್ಥಾನಿ ಗಾಯನ, 8.30ಕ್ಕೆ ಬೆಂಗಳೂರಿನ ವಿ.ಕಾವ್ಯಾ ಕಾಶಿನಾಥನ್ ಮತ್ತು ಶಶಾಂಕ್ ಕಿರೋಣ ನಾಯರ್ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.

ಏ.20ರಂದು ಬೆಳಿಗ್ಗೆ 6 ಗಂಟೆಗೆ ಲಕ್ಷ್ಮೇಶ್ವರದ ಖ್ಯಾತ ಕಲಾವಿದ ಕೃಷ್ಣ ಕ್ಷತ್ರಿಯ ಅವರಿಂದ ಶಹನಾಯಿ ವಾದನ, 7 ಗಂಟೆಗೆ ಹುಬ್ಬಳ್ಳಿಯ ಕೃತಿಕಾ ಜಂಗಿನಮಠರಿಂದ ಬಾನ್ಸುರಿ ವಾದನ ನಡೆಯಲಿದೆ. ಸಂಜೆ 6ಕ್ಕೆ ಬೆಂಗಳೂರಿನ ಮನೋಹರ ಪಟವರ್ಧನ ಮತ್ತು ತಂಡದವರಿಂದ ಹಿಂದೂಸ್ಥಾನಿ ಗಾಯನ, 7.30ಕ್ಕೆ ಬೆಂಗಳೂರಿನ ನಂದಿನಿ ಮೆಹ್ತಾ ಮತ್ತು ಕೆ.ಮುರಳಿ ಅವರಿಂದ ಕಥಕ್ ಕಿ ಕಾನಾಕ್ ಜರುಗಲಿದೆ. 8.30ಕ್ಕೆ ಬೆಂಗಳೂರಿನ ಡಾ.ರೇಖಾ ರಾಜು ಮತ್ತು ತಂಡದವರಿಂದ ಮೋಹಿನಿಅಟ್ಟಂ ನೃತ್ಯ ಪ್ರದರ್ಶನ ನಡೆಯಲಿದೆ.

ಏ.21ರ ಬೆಳಿಗ್ಗೆ 6ಕ್ಕೆ ಹುಬ್ಬಳ್ಳಿಯ ಶಶಿಕಲಾ ದಾನಿ ಅವರಿಂದ ಜಲತರಂಗ ವಿಶೇಷ ಕಾರ್ಯಕ್ರಮ, 7 ಗಂಟೆಗೆ ಶಿರಹಟ್ಟಿಯ ಶೃತಿ ರೊಟ್ಟಿ ಜೋಶಿ ಅವರಿಂದ ಹಿಂದೂಸ್ಥಾನಿ ಗಾಯನ ನೆರವೇರಲಿದೆ. ಸಂಜೆ 6ಕ್ಕೆ ಬೆಂಗಳೂರಿನ ಡಾ.ರವೀಂದ್ರ ಗುರುರಾಜ ಕಾಟೋಟಿ ಅವರಿಂದ ಹಾರ್ಮೋನಿಯಂ ಸೋಲೋ, 7.30ಕ್ಕೆ ಬೆಂಗಳೂರಿನ ಅರ್ಚನಾ ಮತ್ತು ಚೇತನಾ ಅವರಿಂದ ಭರತನಾಟ್ಯ, 8.30ಕ್ಕೆ ಬೆಂಗಳೂರಿನ ಅನುಶ್ರೀ ಪದ್ಮನಾಮ ಅವರಿಂದ ಓಡಿಸ್ಸಿ ನೃತ್ಯ ಪ್ರದರ್ಶನ ಜರುಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಶಿಥಿಲಾವಸ್ಥೆಯಲ್ಲಿದ್ದ ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾವನ್ನು ಡಾ. ಸುಧಾ ನಾರಾಯಣ ಮೂರ್ತಿ ತಮ್ಮದೇ ಪ್ರತಿಷ್ಠಾನದಿಂದ 4.5 ಕೋಟಿ ರೂ. ಖರ್ಚು ಮಾಡಿ ಜೀರ್ಣೊದ್ಧಾರಗೊಳಿಸಿದರು. ಬಳಿಕ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಳೆ ತುಂಬಲು `ಪುಲಿಗೆರೆ ಉತ್ಸವ’ ಹೆಸರಿನಲ್ಲಿ ಪ್ರತಿವರ್ಷ ಬೆಂಗಳೂರಿನ ಭಾರತಿ ವಿದ್ಯಾಭವನದ ನೇತೃತ್ವದಲ್ಲಿ ಸಂಗೀತ, ನೃತ್ಯ, ಚಿತ್ರ ಸಂಭ್ರಮದ ಮೂಲಕ ಈ ಭಾಗದ ಜನತೆಗೆ ಭಾರತೀಯ ಕಲೆ, ಸಂಗೀತ, ಶಿಲ್ಪಕಲೆ, ಇತಿಹಾಸ ಪರಂಪರೆ ಉಳಿಸಿ ಬೆಳೆಸುವ ಮಹೋನ್ನತ ಕಾರ್ಯ ಮಾಡುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here