ನವದೆಹಲಿ: ಅಕ್ಕಿ ಬೆಲೆ ನಿಯಂತ್ರಣ ಹಾಗೂ ಅಕ್ರಮ ದಾಸ್ತಾನು ತಡೆಗೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಅಕ್ಕಿ ಮತ್ತು ಭತ್ತದ ದಾಸ್ತಾನು ಮಿತಿ ವಿಧಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಅಗತ್ಯವಿರುವ ಕಡೆ 2027ರ ಜನವರಿ 31ರವರೆಗೆ ಈ ಮಿತಿ ಜಾರಿಗೊಳಿಸಬಹುದು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಿಗೆ ಈ ಅನುಮತಿ ನೀಡಲಾಗಿದೆ. ದೇಶದಲ್ಲಿ ಅಕ್ಕಿಯ ಸಮರ್ಪಕ ಪೂರೈಕೆ ಖಚಿತಪಡಿಸುವುದು, ಬೆಲೆ ಸ್ಥಿರತೆ ಕಾಯ್ದುಕೊಳ್ಳುವುದು ಹಾಗೂ ಅಕ್ರಮ ದಾಸ್ತಾನು ತಡೆಯುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.
ಇನ್ನೊಂದೆಡೆ, ದಕ್ಷಿಣ ರಾಜ್ಯಗಳಲ್ಲಿ ಅಕ್ಕಿ ಲಭ್ಯತೆ ಹೆಚ್ಚಿಸಲು ಕೇಂದ್ರ ಸರ್ಕಾರ ‘ಭಾರತ್ ರೈಸ್’ ಹೆಚ್ಚುವರಿ ಹಂಚಿಕೆ ಮಾಡಿದೆ. NAFED, NCCF ಮತ್ತು ಕೇಂದ್ರೀಯ ಭಂಡಾರ್ ಸಂಸ್ಥೆಗಳ ಮೂಲಕ ಗ್ರಾಹಕರಿಗೆ ಅಕ್ಕಿ ಸುಲಭವಾಗಿ ತಲುಪಿಸುವಂತೆ ಸೂಚಿಸಲಾಗಿದೆ.
ಇನ್ನು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಅಕ್ಕಿ ಮಾರಾಟದ ಗುರಿಯನ್ನೂ ಕೇಂದ್ರ ಸರ್ಕಾರ ಹೆಚ್ಚಿಸಿದೆ. 2026-27ನೇ ಸಾಲಿನಲ್ಲಿ ಈ ಹಿಂದೆ 25 ಲಕ್ಷ ಮೆಟ್ರಿಕ್ ಟನ್ ಇದ್ದ ಗುರಿಯನ್ನು 50 ಲಕ್ಷ ಮೆಟ್ರಿಕ್ ಟನ್ಗೆ ಏರಿಸಲಾಗಿದೆ. ಅಕ್ಟೋಬರ್ 31ರವರೆಗೆ ಇ-ಹರಾಜಿನ ಮೂಲಕ ಈಗಾಗಲೇ 25 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮಾರಾಟ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಅಲ್ಲದೆ, ಅಕ್ಕಿ ಮತ್ತು ಭತ್ತ ದಾಸ್ತಾನು ಹೊಂದಿರುವ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ದೊಡ್ಡ ಚಿಲ್ಲರೆ ಸರಪಳಿ ಸಂಸ್ಥೆಗಳು ಹಾಗೂ ಅಕ್ಕಿ ಗಿರಣಿದಾರರು ತಮ್ಮ ದಾಸ್ತಾನು ವಿವರಗಳನ್ನು ಪ್ರತಿ ಶುಕ್ರವಾರ ಫುಡ್ ಸ್ಟಾಕ್ ಪೋರ್ಟಲ್ನಲ್ಲಿ ನವೀಕರಿಸುವುದು ಕಡ್ಡಾಯವಾಗಿದೆ.
ನಿಯಮ ಉಲ್ಲಂಘಿಸುವ ಅಥವಾ ದಾಸ್ತಾನು ವಿವರ ಸಲ್ಲಿಸದ ಸಂಸ್ಥೆಗಳ ವಿರುದ್ಧ ಅಗತ್ಯ ಸರಕುಗಳ ಕಾಯ್ದೆ 1955ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಲ್ಹಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ.
ದೇಶದಲ್ಲಿ ಅಕ್ಕಿ ಬೆಲೆ ನಿಯಂತ್ರಣದಲ್ಲಿಡುವುದು, ಗ್ರಾಹಕರಿಗೆ ಸಮಂಜಸ ದರದಲ್ಲಿ ಅಕ್ಕಿ ಲಭ್ಯವಾಗುವಂತೆ ಮಾಡುವುದು ಹಾಗೂ ಕಾಳಸಂತೆ ವ್ಯಾಪಾರಕ್ಕೆ ಕಡಿವಾಣ ಹಾಕುವುದು ಕೇಂದ್ರದ ಈ ಕ್ರಮಗಳ ಉದ್ದೇಶವಾಗಿದೆ.










