ವಿಜಯಸಾಕ್ಷಿ ಸುದ್ದಿ, ಗದಗ: ಆರೋಗ್ಯ ಮತ್ತು ಸ್ವಚ್ಛತೆ, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ಬಳಕೆ ಮೊದಲಾದ ಮೂಲ ವಿಷಯಗಳ ಕುರಿತು ಗ್ರಾಮೀಣ ಕೂಟದ ಸದಸ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿ ಮನೆಗೂ ತೆರಳಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಜಾಗೃತಿ ಮೂಡಿಸಬೇಕು ಎಂದು ಗದಗ ಪ್ರಭಾರಿ ತಾಲೂಕು ಆರೋಗ್ಯಾಧಿಕಾರಿ ಡಾ. ಚೇತನ ಹೊಸೂರ ಹೇಳಿದರು.
ತಾಲೂಕಿನ ಅಸುಂಡಿ ಗ್ರಾಮದಲ್ಲಿ ಗದಗ ನಗರದ ಕೆ.ಎಲ್.ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಅರಿವು ಮತ್ತು ವೈಯಕ್ತಿಕ ನೈರ್ಮಲ್ಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರೋಗ್ಯ ಎಂದರೆ ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮದ ಸ್ಥಿತಿ; ಕೇವಲ ರೋಗಗಳ ಅನುಪಸ್ಥಿತಿ ಅಲ್ಲ. ನೈರ್ಮಲ್ಯ ಎಂದರೆ ತನ್ನನ್ನು ಮತ್ತು ತನ್ನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಅಭ್ಯಾಸಗಳು ಮತ್ತು ಪರಿಸ್ಥಿತಿಗಳು. ಒಟ್ಟಾಗಿ, ಅವು ಆರೋಗ್ಯಕರ, ತೃಪ್ತಿಕರ ಜೀವನಕ್ಕೆ ಅಡಿಪಾಯವನ್ನು ರೂಪಿಸುತ್ತವೆ ಎಂದರು.
ಉಪನ್ಯಾಸಕಿ ಡಾ. ಜ್ಯೋತಿ ಸಿ.ವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಸರ್ವತೋಮುಖ ಅಭಿವೃದ್ಧಿಗಾಗಿ ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆರೋಗ್ಯ ರಕ್ಷಣೆಯ ಮಹತ್ವದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಎನ್‌ಎಸ್‌ಎಸ್ ಸ್ವಯಂಸೇವಕರು ಸ್ವಯಂಪ್ರೇರಣೆಯಿಂದ ಒಂದು ಹೆಜ್ಜೆ ಮುಂದೆ ಹಾಕಬೇಕು ಎಂದರು.
ಉಪನ್ಯಾಸಕರಾದ ಡಾ. ವಿಜಯ ಮುರುದಂಡೆ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಡಾ. ಸಿ.ಬಿ. ರಣಗಟ್ಟಿಮಠ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಭಾವನಾ ಪ್ರಾರ್ಥಿಸಿದರು. ಅಲ್ಲಮಸಾಬ ನದಾಫ್ ಸ್ವಾಗತಿಸಿದರು. ರಮೇಶ ನಿರೂಪಿಸಿದರು. ವಿಶ್ವಾ ಹಿರೇಮಠ ವಂದಿಸಿದರು.


