ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಹಿರೇರಾಯಕುಂಪಿ ಬಳಿ ಕೃಷ್ಣಾ ನದಿಯಲ್ಲಿ ಮೊಸಳೆ ದಾಳಿ ನಡೆದಿದ್ದು, ಕುರಿಗಾಹಿಯೊಬ್ಬರ ಬಲಗೈ ತುಂಡಾಗಿದೆ. ಮೊಸಳೆ ದಾಳಿಗೆ ಒಳಗಾದ ಹೊನ್ನಗುಡೆಪ್ಪ ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕುರಿ ಮರಿಗಳಿಗೆ ನೀರು ತರಲು ಕೃಷ್ಣಾ ನದಿಗೆ ಹೋದ ವೇಳೆ ಏಕಾಏಕಿ ಮೊಸಳೆ ದಾಳಿ ನಡೆಸಿದೆ. ಕೈ ಕಚ್ಚಿಕೊಂಡು ನದಿಯೊಳಗೆ ಎಳೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿದೆ.
ಆದರೆ ಧೈರ್ಯವಾಗಿ ಹೋರಾಡಿದ ಹೊನ್ನಗುಡೆಪ್ಪ ಮೊಸಳೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ವೇಳೆ, ಬಲಗೈ ತುಂಡಾಗಿದೆ. ಗಾಯಾಳುವನ್ನು ರಾಯಚೂರಿನ ಓಪೆಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಭಾಗದಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ, ನದಿ ತೀರದ ಜನರಲ್ಲಿ ಭೀತಿ ಹೆಚ್ಚಾಗಿದೆ. ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಮೊಸಳೆಗಳ ನಿಯಂತ್ರಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಜೊತೆಗೆ ಗಾಯಾಳುವಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.



