ವಿಜಯಸಾಕ್ಷಿ ಸುದ್ದಿ, ಗದಗ : ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಂಜುಮನ್ ಇಸ್ಲಾಂ ಸಂಸ್ಥೆ ಮೊಸಳೆ ಕಣ್ಣೀರು ಸುರಿಸುತ್ತಾ ನಾಟಕವಾಡುತ್ತಿದೆ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆರೋಪಿಸಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂಜುಮನ್ ಇಸ್ಲಾಂ ಸಂಸ್ಥೆ ನಿಜವಾಗಿಯೂ ಈ ಬಗ್ಗೆ ಕಳಕಳಿ ಹೊಂದಿದ್ದರೆ ಹಿಂದೆ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಯಾಕೆ ಬಾಯಿ ಬಿಟ್ಟಿಲ್ಲ? ನೇಹಾ ಹಿರೇಮಠ ಕಾಂಗ್ರೆಸ್ ಕಾರ್ಪೊರೇಟರ್ ಮಗಳು ಎನ್ನುವ ಕಾರಣಕ್ಕೆ ಮಾತಾಡುತ್ತಿದ್ದೀರಿ. ಅಂಜುಮನ್ ಇಸ್ಲಾಂ ಸಂಸ್ಥೆಗೆ ನಿಜವಾಗಿಯೂ ಕಳಕಳಿ ಇದ್ದರೆ ಆರೋಪಿಯ ಮನೆ ಧ್ವಂಸ ಮಾಡಿ, ಆ ಕುಟುಂಬಕ್ಕೆ ಬಹಿಷ್ಕಾರ ಹಾಕಿ ಫತ್ವಾ ಹೊರಡಿಸಿ ಎಂದು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರಜೀ ಕುಲಕರ್ಣಿ, ರಾಜು ಖಾನಪ್ಪನವರ್, ಬಸವರಾಜ ಕುರ್ತಕೋಟಿ, ಕಿರಣ ಹಿರೇಮಠ, ಸತೀಶ್ ಕುಂಬಾರ, ಶಿವಯೋಗಿ ಹಿರೇಮಠ, ಮಹೇಶ ರೋಕಡೆ, ಸೋಮು ಗುಡಿ, ಸುರೇಶ್ ಹಾದಿಮನಿ ಮುಂತಾದವರಿದ್ದರು.
ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರ ಇದೆ. ಹೀಗಾಗಿ ಹಿಂದೂಗಳಿಗೆ ರಕ್ಷಣೆ ಇಲ್ಲ. ಸರ್ಕಾರ ಮುಸ್ಲಿಮರ ಓಲೈಕೆ ಮಾಡುತ್ತಿದೆ. ಕಾಂಗ್ರೆಸ್ ಈ ಹಿಂದೆ ಬ್ರಿಟಿಷರ ಪರ ಇತ್ತು. ಈಗ ಮುಸ್ಲಿಂ ಪರವಾಗಿದೆ ಎಂದು ಕಿಡಿಕಾರಿದ ಪ್ರಮೋದ ಮುತಾಲಿಕ, ರಾಜ್ಯ ಸರಕಾರದ ಈ ಧೋರಣೆಯನ್ನು ಖಂಡಿಸಿ ಇದೇ ಏಪ್ರಿಲ್ 22ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಮೋದ ಮುತಾಲಿಕ್ ತಿಳಿಸಿದರು.


