ವಿಜಯಸಾಕ್ಷಿ ಸುದ್ದಿ, ರೋಣ: ಮುಂಗಾರು ಪೂರ್ವ ಮಳೆಯಿಂದ ಬೆಣ್ಣೆಹಳ್ಳ ತುಂಬಿ ಪ್ರವಾಹ ಪೀಡಿತ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳಿಗೆ ಅಪಾರ ಹಾನಿ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಎನ್‌ಡಿಆರ್‌ಎಫ್ ತಂಡ ಮಂಗಳವಾರ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದರು.
ಮಂಗಳವಾರ ಸಂಜೆ ಪ್ರವಾಹ ಪೀಡಿತ ಯಾವಗಲ್ಲ ಗ್ರಾಮ ಸೇರಿದಂತೆ ಇತರ ಗ್ರಾಮಗಳಿಗೆ ಭೇಟಿ ನೀಡಿದ ಕೇಂದ್ರ ತಂಡ ವಾಸ್ತವ ಸ್ಥಿತಿಯ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ತಹಸೀಲ್ದಾರ ನಾಗರಾಜ ಕೆ, ಕೃಷಿ ಅಧಿಕಾರಿ ಬಿ.ಆರ್. ಫಾಲಾಕ್ಷಗೌಡ ಅವರಿಂದ ಬೆಳೆಗಳ ಬಗ್ಗೆ ಅಗತ್ಯ ಮಾಹಿತಿ ಪಡೆದರು. ಬೆಣ್ಣೆಹಳ್ಳಕ್ಕೆ ಕೇಂದ್ರ ತಂಡ ಭೇಟಿ ನೀಡುತ್ತಿದ್ದಂತೆ ಗ್ರಾಮದ ರೈತರು ಹಳ್ಳದ ರಭಸಕ್ಕೆ ಆಗಿರುವ ಹಾನಿಯನ್ನು ವಿವರಿಸತೊಡಗಿದರು. ಪ್ರತಿ ಬಾರಿಯೂ ಇದೇ ರೀತಿ ಸಮಸ್ಯೆಯಾಗುತ್ತಿದೆ, ಇದರ ಕುರಿತು ಶಾಶ್ವತ ಪರಿಹಾರ ಕೈಗ್ವೆಂಡು ರೈತರನ್ನು ಕಾಪಡಬೇಕು ಎಂದು ತಮ್ಮ ಅಳಲು ತೋಡಿಕೊಂಡರು.
ಸೇತುವೆಯ ಎತ್ತರ ಹೆಚ್ಚಿಸಬೇಕು, ಬೆಣ್ಣೆಹಳ್ಳದ ಹೂಳು ತೆಗೆಯಬೇಕು, ಬೆಳೆಹಾನಿಗೆ ಸೂಕ್ತ ಪರಿಹಾರವನ್ನು ವಿತರಿಸಬೇಕು ಎಂದು ರೈತರು ವಿನಂತಿಸಿದರು. ತಹಸೀಲ್ದಾರ ನಾಗರಾಜ ಕೆ, ಕೃಷಿ ಉಪನಿರ್ದೇಶಕ ಬಿ.ಆರ್. ಫಾಲಾಕ್ಷಗೌಡ, ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ತಹಸೀಲ್ದಾರ, ರೈತರಾದ ಮುತ್ತಣ್ಣ ಕುರಿ, ಮುದ್ದಣ್ಣ ನವಲಗುಂದ, ಶಂಕ್ರಪ್ಪ ಬ್ಯಾಟಿ, ಈರಣ್ಣ ಕುಂಬಾರ, ಮಂಜು, ಈರಣ್ಣ ಸೇರಿದಂತೆ ನೂರಾರು ರೈತರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರವಾಹ ಪೀಡಿತ ಗ್ರಾಮಗಳಿಗೆ ಮಂಗಳವಾರ ಸಂಜೆ ಕೇಂದ್ರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬೆಣ್ಣೆಹಳ್ಳದ ಪ್ರವಾಹದಿಂದ 2.517 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾದ ಬಗ್ಗೆ ವರದಿಯನ್ನು ಸಲ್ಲಿಸಲಾಗಿದೆ. ಅಲ್ಲದೆ ಕೇಂದ್ರ ತಂಡ ಕೇಳಿದ ಮಾಹಿತಿಗಳನ್ನು ಸಹ ಒದಗಿಸಲಾಗಿದೆ.
– ಬಿ.ಆರ್. ಫಾಲಾಕ್ಷಗೌಡ.
ಉಪ ನಿರ್ದೇಶಕರು, ಕೃಷಿ ಇಲಾಖೆ.