ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಆಧುನಿಕ ದಿನಮಾನಗಳಲ್ಲಿ ಪಾಲಕ-ಪೋಷಕರು ತಮ್ಮ ಮಕ್ಕಳಿಗೆ ಧರ್ಮದ ಹಾದಿಯಲ್ಲಿ ಮುನ್ನಡೆಸುವ ಮೂಲಕ ಅವರಿಗೆ ಒಳ್ಳೆಯ ಸಂಸ್ಕಾರ, ಸನ್ನಡತೆಯನ್ನು ರೂಢಿಸಬೇಕು. ಸಂಸ್ಕಾರ-ಸನ್ನಡತೆ ಇಲ್ಲದಿದ್ದರೆ ಶಿಕ್ಷಣಕ್ಕಿಲ್ಲ ನೆಲ-ಬೆಲೆ ಎಂದು ಶ್ರೀಕ್ಷೇತ್ರ ಪಂಡರಾಪೂರದ ಪೂಜ್ಯ ಪ್ರಭಾಕರ (ದಾದಾ) ಬೋಧಲೆ ಮಹಾರಾಜರು ಹೇಳಿದರು.
ಅವರು ಗದಗ ವಿಠ್ಠಲ ಮಂದಿರದಲ್ಲಿ ಗದಗ ಭಾವಸಾರ ಕ್ಷತ್ರಿಯ ಸಮಾಜ ಏರ್ಪಡಿಸಿದ್ದ ಸಂತ ಶ್ರೀ ಜ್ಞಾನೇಶ್ವರ ಮಹಾರಾಜರ 729ನೇ ಸಂಜೀವಿನಿ ಸಮಾಧಿ ನಿಮಿತ್ತ ದಿಂಡಿ ಸೋಹಳಾ ಉತ್ಸವದ ಅಂಗವಾಗಿ ಜರುಗಿದ ಕಾಲಕೀರ್ತನೆಯಲ್ಲಿ ಮಾತನಾಡಿದರು.
ಯುವಕರು ಕೇವಲ ಮನೆ, ಸಮಾಜಕ್ಕೆ ಮಾತ್ರವಲ್ಲ, ದೇಶಕ್ಕೆ ಆಸ್ತಿಯಾಗಿದ್ದಾರೆ. ಇಂತಹ ಯುವ ಜನಾಂಗವನ್ನು ದುಶ್ಚಟಗಳಿಂದ ದೂರವಿರಿಸಿ ಸದೃಢವಾಗಿ ಬೆಳೆಸಬೇಕು. ಯು ಎಂದರೆ ಯುದಿಷ್ಠನಲ್ಲಿದ್ದಂತಹ ನೀತಿ, ವ ಎಂದರೆ ವಸಿಷ್ಠನಲ್ಲಿದ್ದಂತಹ ಜ್ಞಾನ, ಕ ಎಂದರೆ ಗಾನ, ಕೇಳು ಎಂದರ್ಥ. ಇವೆಲ್ಲವೂ ಸಮ್ಮಿಳಿತಗೊಂಡು ‘ಯುವಕ’ ಎಂದು ಅರ್ಥೈಸಬಹುದಾಗಿದೆ ಎಂದು ವಿಶ್ಲೇಷಿಸಿದರು.
ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಯುವವರನ್ನು ದೇವರು ಎಂದಿಗೂ ಕೈಬಿಡುವುದಿಲ್ಲ. ಅವರಿಗೆ ಭವಿಷ್ಯದಲ್ಲಿ ಫಲ ಪ್ರಾಪ್ತಿ ಆಗುವದು ನಿಶ್ಚಿತ. ಆದ್ದರಿಂದ ಎಲ್ಲರೂ ಧರ್ಮವಂತರಾಗಿ, ಕಾಯಕ ಮಾಡಿ, ದಾಸೋಹ, ಧರ್ಮ ಕಾರ್ಯ ಮಾಡಿ ಎಂದರಲ್ಲದೆ, ಗದಗ ಭಾವಸಾರ ಕ್ಷತ್ರಿಯ ಸಮಾಜವು ಉತ್ಸವ ಸಮಿತಿ, ಯುವಕ ಸಮಿತಿ ಹಾಗೂ ಮಹಿಳಾ ಸಮಿತಿಯ ಮೂಲಕ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಇವರೆಲ್ಲರಿಗೂ ಸೂಕ್ತ ಮಾರ್ಗದರ್ಶನ ಮಾಡಿದ ಸಮಾಜದ ಗುರು-ಹಿರಿಯರು ಅಭಿನಂದನೀಯರು ಎಂದರು.
ಕಾಲಕೀರ್ತನೆ ಬಳಿಕ ಆರತಿ, ಮಹಾಪ್ರಸಾದ ಜರುಗಿತು. ಸಂಜೆ ದಿಂಡಿಯು ನಗರ ಪ್ರದಕ್ಷಿಣೆಯ ನಂತರ ದೇವಸ್ಥಾನಕ್ಕೆ ಮರಳಿತು.


