ವಿಜಯಸಾಕ್ಷಿ ಸುದ್ದಿ, ರೋಣ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ, 2025-26ನೇ ಸಾಲಿನ ಕ್ರಿಯಾ ಯೋಜನೆ ತಯಾರಿಕೆ ಪ್ರಕ್ರಿಯೆ ಅಕ್ಟೋಬರ್ 2ರಿಂದ ಪ್ರಾರಂಭವಾಗಿದ್ದು, ಡ.ಸ. ಹಡಗಲಿ ಗ್ರಾಮಸ್ಥರು ನರೇಗಾ ಕಾಮಗಾರಿ ಬೇಡಿಕೆಯನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ಸಲ್ಲಿಸಬಹುದು ಎಂದು ಸಹಾಯಕ ನಿರ್ದೇಶಕ ಚಂದ್ರಶೇಖರ ಬಿ.ಕಂದಕೂರ ಹೇಳಿದರು.
ಡ.ಸ ಹಡಗಲಿ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ನಡಿಗೆ ಸಬಲತೆಯೆಡೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಗಾ ಯೋಜನೆಯು ಗ್ರಾಮೀಣ ಭಾಗದ ಜನರಿಗೆ ಆಶಾಕಿರಣವಾಗಿದೆ.
ವೈಯಕ್ತಿಕ ಕಾಮಗಾರಿಗಳ ಬೇಡಿಕೆ ಸಲ್ಲಿಸುವ ಮೂಲಕ ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.
ನರೇಗಾ ಯೋಜನೆಯಡಿ ಓರ್ವ ವ್ಯಕ್ತಿಯು 3 ಕಾಮಗಾರಿಗಳವರೆಗೆ ಅರ್ಜಿ ಸಲ್ಲಿಸಬಹುದು. ಒಟ್ಟು 5 ಲಕ್ಷದವರೆಗೂ ಲಾಭ ಪಡೆದುಕೊಳ್ಳಬಹುದು. ಯಾವುದೇ ಕಾಮಗಾರಿಯ ಲಾಭ ಪಡೆಯಲು ಫಲಾನುಭವಿಗಳು ತಮ್ಮ ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದು. ಫಲಾನುಭವಿ ನೇರವಾಗಿ ಅರ್ಜಿ ಸಲ್ಲಿಸುವುದರಿಂದ ಮಧ್ಯವರ್ತಿಗಳು ಇಲ್ಲದೇ ಕಾಮಗಾರಿ ಕ್ರಿಯಾಯೋಜನೆ ಆಗುತ್ತದೆ. ಈ ಎಲ್ಲಾ ಕಾಮಗಾರಿಗಳನ್ನು ಸಂಗ್ರಹಿಸಿ ಆದ್ಯತಾ ಪಟ್ಟಿ ತಯಾರಿಸಿ ಗ್ರಾಮ ಸಭೆಯಲ್ಲಿ ಮಂಡಿಸಿ, ಅನುಮೋದನೆಯನ್ನು ಪಡೆಯಲಾಗುತ್ತದೆ. ಇದರಿಂದಾಗಿ ನೈಜ ಫಲಾನುಭವಿಗಳಿಗೆ ಅವಕಾಶ ಸಿಗುವಂತಾಗಿದೆ ಎಂದರು.
ವೈಯಕ್ತಿಕ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳು ದನದ ಕೊಟ್ಟಿಗೆ, ಬಚ್ಚಲು ಗುಂಡಿ, ಕೋಳಿ ಶೆಡ್, ಕೃಷಿ ಹೊಂಡ ಕಾಮಗಾರಿ ಮಾಡಿಕೊಳ್ಳಲು ಸಾಧ್ಯವಿದೆ. ತೋಟಗಾರಿಕೆ ಇಲಾಖೆಯ ಬೆಳೆಗಳಾದ ತೆಂಗು, ಮಾವು, ದಾಳಿಂಬೆ, ಸೀಬೆ, ಗುಲಾಬಿ, ಮಲ್ಲಿಗೆ, ಬಾಳೆ ಮತ್ತು ಪಪ್ಪಾಯಿ ಸೇರಿದಂತೆ ವಿವಿಧ ಬೆಳೆಗಳಿಗೆ ಆರ್ಥಿಕ ನೆರವು ಪಡೆದು ಬೆಳೆದುಕೊಳ್ಳಬಹುದು ಎಂದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಈಶ್ವರಗೌಡ ಪಾಟೀಲ ಮಾತಾನಾಡಿ, ಗ್ರಾಮದಲ್ಲಿ ಈಗಾಗಲೇ ಐ.ಇ.ಸಿ ಚಟುವಟಿಕೆಗಳ ಮೂಲಕ ಮನೆ ಮನೆ ಭೇಟಿ ಮಾಡಿ ಕಾಮಗಾರಿ ಬೇಡಿಕೆ ಪೆಟ್ಟಿಗೆಯಲ್ಲಿ ಕಾಮಗಾರಿಗಳನ್ನು ಸಂಗ್ರಹಿಸಲಾಗುತ್ತಿದ್ದು, ನರೇಗಾ ಫಲಾನುಭವಿಗಳು ಕಾಮಗಾರಿಗಳ ಬೇಡಿಕೆಯನ್ನು ಪೆಟ್ಟಿಗೆಯಲ್ಲಿ ಹಾಕಬಹುದು.
ಈ ಕಾಮಗಾರಿಗಳನ್ನು ತಾಂತ್ರಿಕ ಸಂಯೋಜಕರು ಪೂರ್ವಭಾವಿಯಾಗಿ ವೀಕ್ಷಣೆ ಮಾಡಿ ಅಂದಾಜು ಪತ್ರಿಕೆ ತಯಾರಿಸುತ್ತಾರೆ. ಅದೇ ಕಾಮಗಾರಿಯನ್ನು ಕ್ರಿಯಾ ಯೋಜನೆಯಲ್ಲಿ ಇಡುವುದರಿಂದ ಎಲ್ಲಾ ಕಾಮಗಾರಿಗಳನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಬಹುದು ಎಂದರು.
ಗ್ರಾ.ಪಂ ಅಧ್ಯಕ್ಷ ಗಂಗಾಧರ ಕಮ್ಮಾರ, ಸದಸ್ಯರು, ತಾ.ಪಂ ತಾಂತ್ರಿಕ ಸಂಯೋಜಕ ಪ್ರವೀಣ ಸೂಡಿ, ಐಇಸಿ ಸಂಯೋಜಕ ಮಂಜುನಾಥ ಎಸ್, ಬಿಎಫ್‌ಟಿ ಪ್ರಕಾಶ ಅಂಬಕ್ಕಿ, ಗ್ರಾ.ಪಂ ಕಾರ್ಯದರ್ಶಿ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.
ತಾಲೂಕಿನ ಪ್ರತಿ ಗ್ರಾಮದಲ್ಲಿ ಈಗಾಗಲೇ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ವಿತರಣಾ ಮೇಳವನ್ನು ಸಹ ಹಮ್ಮಿಕೊಳ್ಳಲಾಗಿದ್ದು, ಕಳೆದ ಸಾಲಿನಲ್ಲಿ ಬೇಡಿಕೆ ಸಲ್ಲಿಸಿದ ಅರ್ಹ ಫಲಾನುಭವಿಗಳು ಇದರ ಲಾಭವನ್ನು ಪಡೆದುಕೊಳ್ಳಬೇಕು.
– ಮಂಜುಳಾ ಹಕಾರಿ.
ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು, ರೋಣ.