ಬೆಂಗಳೂರು: ದಲಿತ ಮುಖ್ಯಮಂತ್ರಿ ವಿಚಾರವಾಗಿ ಸ್ವಾಮೀಜಿಗಳು ಹಾಗೂ ವಿವಿಧ ಸಂಘಟನೆಗಳು ಧ್ವನಿ ಎತ್ತಿರುವ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಅದು ಅವರ ಭಾವನೆ, ಅವರ ಅನಿಸಿಕೆ. ಅದನ್ನು ತಪ್ಪು ಎಂದು ನಾನು ಹೇಗೆ ಹೇಳಲು ಸಾಧ್ಯ? ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಅಷ್ಟೆ” ಎಂದು ಹೇಳಿದ್ದಾರೆ.
ಇನ್ನು ದ್ವೇಷ ಭಾಷಣ ಮಸೂದೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಗೃಹ ಸಚಿವರು, “ಈ ಮಸೂದೆ ಯಾರನ್ನೂ ಟಾರ್ಗೆಟ್ ಮಾಡಿ ತರಲಾಗಿಲ್ಲ. ಯಾರು ದ್ವೇಷ ಭಾಷಣ ಮಾಡ್ತಾರೋ ಅವರಿಗೆ ಮಾತ್ರ ಇದು ಅನ್ವಯವಾಗುತ್ತದೆ. ಎಲ್ಲರೂ ಕಾನೂನಿಗೆ ಗೌರವ ನೀಡಬೇಕು ಎಂದು ಹೇಳಿದ್ದಾರೆ.
ದ್ವೇಷ ಭಾಷಣಗಳಿಂದ ಈಗಾಗಲೇ ಹಲವು ಕೊಲೆಗಳು ನಡೆದಿರುವುದನ್ನು ಉಲ್ಲೇಖಿಸಿದ ಪರಮೇಶ್ವರ್, “ಅಂತಹ ಘಟನೆಗಳನ್ನು ತಡೆಯುವ ಸಲುವಾಗಿಯೇ ದ್ವೇಷ ಭಾಷಣಗಳನ್ನು ಹತ್ತಿಕ್ಕಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ” ಎಂದು ತಿಳಿಸಿದ್ದಾರೆ.
ಈ ವಿಷಯದಲ್ಲೂ ಬಿಜೆಪಿ ರಾಜಕಾರಣ ಮಾಡಲು ಹೊರಟಿದೆ ಎಂದು ಆರೋಪಿಸಿದ ಅವರು, ಅಧಿವೇಶನದಲ್ಲಿ ಮಸೂದೆ ಪಾಸ್ ಆಗಿದ್ದು, ಶೀಘ್ರದಲ್ಲೇ ರಾಜ್ಯಪಾಲರಿಗೆ ಕಳುಹಿಸಲಾಗುತ್ತದೆ ಎಂದರು. “ರಾಜ್ಯಪಾಲರು ಮಸೂದೆ ಕುರಿತು ಯಾವುದೇ ವಿವರಣೆ ಕೇಳಿದರೆ, ಸರ್ಕಾರದಿಂದ ಸಂಪೂರ್ಣ ಸ್ಪಷ್ಟನೆ ನೀಡಲಾಗುತ್ತದೆ” ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.



