ಬೆಂಗಳೂರು:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷ್ಯಾಧಾರ ನಟ ಚಿಕ್ಕಣ್ಣ ಅವರನ್ನು ಪ್ರಕರಣದ A2 ಆರೋಪಿ ನಟ ದರ್ಶನ್ ಅವರು ಭೇಟಿ ಮಾಡಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ.
ನಟ ಚಿಕ್ಕಣ್ಣರನ್ನು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಾಕ್ಷಿಯಾಗಿ ಪರಿಗಣಿಸಿದೆ. ಇದೀಗ ಜಾಮೀನಿನ ಮೇಲೆ ಹೊರಗಿರುವ ದರ್ಶನ್ ಅವರು ಅದೇ ಪ್ರಕರಣದ ಸಾಕ್ಷಿಯಾಗಿರುವ ಚಿಕ್ಕಣ್ಣ ಅವರನ್ನು ಭೇಟಿಯಾಗಿರೋದು ಸಾಕ್ಷಿನಾಶದ ಪ್ರಯತ್ನವಾಗಬಹುದು ಎನ್ನಲಾಗುತ್ತಿದೆ.
ಬುಧವಾರ ತೀವ್ರ ಬೆನ್ನು ನೋವಿನ ಕಾರಣ ನೀಡಿ ದರ್ಶನ್ ಕೋರ್ಟ್ ವಿಚಾರಣೆಗೆ ಗೈರಾಗಿದ್ದರು. ಇದರಿಂದಾಗಿ ಅಸಮಾಧಾನಗೊಂಡಿದ್ದ ಕೋರ್ಟ್ ದರ್ಶನ್ ಪರ ವಕೀಲರಿಗೆ ಗೈರಾಗಿದ್ದರ ಕುರಿತು ಕ್ಲಾಸ್ ತೆಗೆದುಕೊಂಡಿತ್ತು. ಆದರೆ ಅದೇ ದಿನ ಸಂಜೆ ಆಪ್ತ ಧನ್ವೀರ್ ಅಭಿನಯದ ವಾಮನ ಚಿತ್ರವನ್ನು ದರ್ಶನ್ ವೀಕ್ಷಣೆ ಮಾಡಿದ್ದಾರೆ.
ಈ ವೇಳೆ ನಟ ಚಿಕ್ಕಣ್ಣ ಸಹ ಆಗಮಿಸಿದ್ದು, ಇಬ್ಬರು ಮುಖಾಮುಖಿಯಾಗಿ ಭೇಟಿಯಾಗಿದ್ದಾರೆ. ಹೀಗಾಗಿ ಪ್ರಕರಣದ ಅರೋಪಿಯಾಗಿರುವ ದರ್ಶನ್, ಪ್ರಕರಣದ ಸಾಕ್ಷಿ ಎಂದೇ ಪರಿಗಣಿಸಲಾಗಿರುವ ಚಿಕ್ಕಣ್ಣರನ್ನು ಭೇಟಿಯಾಗಿ ಮಾತಾಡಿರೋದು ಇದೀಗ ಸಾಕ್ಷಿನಾಶದ ಆರೋಪ ಕೇಳಿ ಬಂದಿದೆ.