ಬೆಂಗಳೂರು: ಆಧಾರ್ ಕಾರ್ಡ್ನಲ್ಲಿ ಅಪ್ರಾಪ್ತ ಬಾಲಕಿಯ ಹೆಸರು ಮತ್ತು ಲಿಂಗವನ್ನು ತಪ್ಪಾಗಿ ನಮೂದಿಸಿ, ಹಲವು ಬಾರಿ ಮನವಿ ಮಾಡಿದರೂ ತಿದ್ದುಪಡಿ ಮಾಡದೇ ನಿರ್ಲಕ್ಷ್ಯ ವಹಿಸಿರುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ವಿರುದ್ಧ ಮಹಿಳೆಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಬೆಂಗಳೂರಿನ ಸಿಂಗೇನ ಅಗ್ರಹಾರದ ನಿವಾಸಿ ಲಕ್ಷ್ಮಿ ಅವರು ತಮ್ಮ ಮಗಳ ಪರವಾಗಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ನ್ಯಾಯಪೀಠ ನಡೆಸಿದ್ದು, ಮುಂದಿನ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ.
ಅರ್ಜಿಯ ಪ್ರಕಾರ, ಲಕ್ಷ್ಮಿ ಅವರ ಮಗಳು ತನುಶ್ರೀ 2015ರ ಜುಲೈ 22ರಂದು ಜನಿಸಿದ್ದು, ಜನನ ಪ್ರಮಾಣಪತ್ರ ಹಾಗೂ ಶಾಲಾ ದಾಖಲೆಗಳಲ್ಲಿ ‘ತನುಶ್ರೀ’ ಮತ್ತು ‘ಹೆಣ್ಣು ಮಗು’ ಎಂದೇ ನಮೂದಿಸಲಾಗಿದೆ. ಆದರೆ ಯುಐಡಿಎಐ ನೀಡಿರುವ ಆಧಾರ್ ಕಾರ್ಡ್ನಲ್ಲಿ ಮಗುವಿನ ಹೆಸರನ್ನು ‘ಪೂಜಾ’ ಎಂದು ಹಾಗೂ ಲಿಂಗದ ಜಾಗದಲ್ಲಿ ‘ಗಂಡು’ ಎಂದು ತಪ್ಪಾಗಿ ಮುದ್ರಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ತಪ್ಪನ್ನು ಸರಿಪಡಿಸಲು ತಾಯಿ ಲಕ್ಷ್ಮಿ ಹಲವು ಬಾರಿ ಸಂಬಂಧಿತ ದಾಖಲೆಗಳೊಂದಿಗೆ ಆಧಾರ್ ಕೇಂದ್ರಗಳು ಹಾಗೂ ಯುಐಡಿಎಐ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
2026ರ ಮಾರ್ಚ್ 24ರಂದು ಯುಐಡಿಎಐ ಕೇಂದ್ರ ಕಚೇರಿ ಮತ್ತು ಬೆಂಗಳೂರು ಪ್ರಾದೇಶಿಕ ಕಚೇರಿಗೆ ಕಾನೂನು ನೋಟಿಸ್ ನೀಡಲಾಗಿದ್ದರೂ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಲಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಲಕಿಯ ಶಾಲಾ ಪ್ರವೇಶ, ಸರ್ಕಾರಿ ಸೌಲಭ್ಯಗಳು ಹಾಗೂ ಇತರ ಗುರುತಿನ ದಾಖಲೆಗಳಿಗೆ ತೊಂದರೆ ಉಂಟಾಗುತ್ತಿದೆ. ಇದರಿಂದ ತಾಯಿ ಮತ್ತು ಮಗಳು ತೀವ್ರ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಯುಐಡಿಎಐ ಕ್ರಮವು ಸಂವಿಧಾನದ ವಿಧಿ 14 ಮತ್ತು 21ರ ಅಡಿಯಲ್ಲಿ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಾದಿಸಲಾಗಿದ್ದು, ಅಧಿಕಾರಿಗಳ ಕರ್ತವ್ಯ ವೈಫಲ್ಯದಿಂದ ಬಾಲಕಿಯ ಶೈಕ್ಷಣಿಕ ಹಾಗೂ ಸಾಮಾಜಿಕ ಹಕ್ಕುಗಳಿಗೂ ಧಕ್ಕೆಯಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಹೀಗಾಗಿ ಆಧಾರ್ ಕಾರ್ಡ್ನಲ್ಲಿರುವ ‘ಪೂಜಾ, ಗಂಡು’ ಎಂಬ ತಪ್ಪು ಮಾಹಿತಿಯನ್ನು ತೆಗೆದುಹಾಕಿ ‘ತನುಶ್ರೀ, ಹೆಣ್ಣು’ ಎಂದು ತಕ್ಷಣ ತಿದ್ದುಪಡಿ ಮಾಡಲು ಯುಐಡಿಎಐಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಅಲ್ಲದೇ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅಸಂವಿಧಾನಿಕ ನಡೆಗಾಗಿ ತಪ್ಪಿತಸ್ಥ ಅಧಿಕಾರಿಗಳಿಂದಲೇ ₹10 ಲಕ್ಷ ಪರಿಹಾರ ಕೊಡಿಸಬೇಕು ಎಂದು ಹೈಕೋರ್ಟ್ಗೆ ಅರ್ಜಿದಾರರು ಮನವಿ ಮಾಡಿದ್ದಾರೆ.



