ಬೆಂಗಳೂರು/ನಳಂದ: ಬಿಹಾರದ ರಾಜಗೀರ್‌ನ ಜೈನ ಧರ್ಮಶಾಲೆಯಲ್ಲಿ ಕರ್ನಾಟಕದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವು ಹಲವು ಭಯಾನಕ ಸಂಗತಿಗಳನ್ನು ಬಹಿರಂಗಪಡಿಸಿದೆ. ಕುಟುಂಬ ಕಲಹ, ಸಾಲಬಾಧೆ, ನಿರುದ್ಯೋಗ ಮತ್ತು ಹಳೆಯ ಕೊಲೆ ಪ್ರಕರಣದ ಮಾನಸಿಕ ಒತ್ತಡ ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ನಳಂದ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಜಿ.ಆರ್.ಸುಮಂಗಲಾ (78), ಅವರ ಮಗ ಜಿ.ಆರ್.ನಾಗಪ್ರಸಾದ್ (50), ಪುತ್ರಿಯರಾದ ಜಿ.ಆರ್.ಶಿಲ್ಪಾ (48) ಹಾಗೂ ಆರ್.ಶ್ರುತಾ (43) ಫೆಬ್ರವರಿ 6ರಂದು ರಾಜಗೀರ್‌ನ ದಿಗಂಬರ ಜೈನ ಧರ್ಮಶಾಲೆಯ ಕೊಠಡಿಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತನಿಖೆಯ ಬಳಿಕ ನಾಲ್ವರೂ ಆತ್ಮಹತ್ಯೆಗೆ ಶರಣಾಗಿರುವುದು ದೃಢಪಟ್ಟಿದೆ.
ಈ ಪ್ರಕರಣದ ತನಿಖೆಗಾಗಿ ನಳಂದ ಪೊಲೀಸರು ಈಗ ಕರ್ನಾಟಕಕ್ಕೆ ಭೇಟಿ ನೀಡಲು ತೀರ್ಮಾನಿಸಿದ್ದು, ಮೃತರ ಕುಟುಂಬ ಹಿನ್ನೆಲೆ, ಆರ್ಥಿಕ ಸ್ಥಿತಿ ಮತ್ತು ಮಾನಸಿಕ ಒತ್ತಡದ ಕುರಿತು ಮಾಹಿತಿ ಸಂಗ್ರಹಿಸಲಿದ್ದಾರೆ. ಸಂಬಂಧಿಕರು ಈಗಾಗಲೇ ಬಿಹಾರಕ್ಕೆ ಬಂದು ಪೊಲೀಸರಿಗೆ ಮಹತ್ವದ ವಿವರಗಳನ್ನು ನೀಡಿದ್ದಾರೆ ಎಂದು ರಾಜಗೀರ್ ಪೊಲೀಸ್ ಠಾಣಾಧಿಕಾರಿ ರಮಣ್ ಕುಮಾರ್ ತಿಳಿಸಿದ್ದಾರೆ.
ತನಿಖೆಯ ವೇಳೆ, ಕುಟುಂಬವು ಕೊಠಡಿಯಿಂದ ವಶಪಡಿಸಿಕೊಂಡ 1.18 ಲಕ್ಷ ರೂ. ನಗದು ಹಾಗೂ ಆಭರಣಗಳನ್ನು ಜೈನ ಧರ್ಮಶಾಲೆಗೆ ದಾನ ಮಾಡಿರುವುದು ತಿಳಿದುಬಂದಿದೆ. ಮೃತ ನಾಗಪ್ರಸಾದ್ ಅವರು ಆನ್‌ಲೈನ್ ಗೇಮ್ ಗೀಳಿಗೆ ಬಿದ್ದ ಅಳಿಯನನ್ನು ಆಗಸ್ಟ್ ತಿಂಗಳಲ್ಲಿ ಕೊಲೆ ಮಾಡಿದ ಪ್ರಕರಣದಲ್ಲಿ ಜೈಲಿಗೆ ಹೋಗಿ, ಐದು ತಿಂಗಳ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು ಎಂಬ ಅಂಶವೂ ಬೆಳಕಿಗೆ ಬಂದಿದೆ.
ಎಂಜಿನಿಯರಿಂಗ್ ಪದವೀಧರರಾಗಿದ್ದ ನಾಗಪ್ರಸಾದ್ ನಿರುದ್ಯೋಗಿಯಾಗಿದ್ದು, ಕುಟುಂಬದ ಸಂಪೂರ್ಣ ಜವಾಬ್ದಾರಿ ಅವರ ಮೇಲೇ ಇದ್ದ ಕಾರಣ ತೀವ್ರ ಒತ್ತಡದಲ್ಲಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ. ಈ ಕುಟುಂಬ ಜನವರಿ 31ರಂದು ನೇಪಾಳ ಮೂಲಕ ತೀರ್ಥಯಾತ್ರೆ ಕೈಗೊಂಡು ರಾಜಗೀರ್‌ಗೆ ಆಗಮಿಸಿತ್ತು.
ಸಾಲಬಾಧೆ, ಸಾಮಾಜಿಕ ಸಂಪರ್ಕದ ಕೊರತೆ ಹಾಗೂ ಮಾನಸಿಕ ಆತಂಕ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂಬ ಅನುಮಾನವನ್ನು ತನಿಖಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ಮತ್ತು ಎಫ್‌ಎಸ್‌ಎಲ್ ವರದಿ ಬಂದ ನಂತರ ಪ್ರಕರಣದ ಅಂತಿಮ ಚಿತ್ರಣ ಸ್ಪಷ್ಟವಾಗಲಿದೆ. ಮೃತರ ಬಟ್ಟೆಗಳನ್ನು ನಾಶಮಾಡಲು ಕುಟುಂಬವು ಒಪ್ಪಿಗೆ ನೀಡಿದ್ದು, ಒಂದು ಎಕರೆ ಭೂಮಿಯನ್ನು ಜೈನ ಧರ್ಮಶಾಲೆಗೆ ದಾನ ಮಾಡುವ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ನಳಂದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.



