ವಿಜಯಪುರ:– ಇತ್ತೀಚಿನ ದಿನಗಳಲ್ಲಿ ಸಾಲಗಾರರ ಕಿರುಕುಳ ತಾಳಲಾರದೇ ಎಷ್ಟೋ ಮಂದಿ ಆತ್ಮಹತ್ಯೆಯ ಹಾದಿ ಹುಡುಕುತ್ತಿರುವ ಪ್ರಕರಣಗಳು ಒಂದಿಲ್ಲೊಂದು ಬೆಳಕಿಗೆ ಬರುತ್ತಲೇ ಇದೆ.
ಅದರಂತೆ ಇಲ್ಲೋರ್ವ ಯುವಕ, ಸಾಲಗಾರರ ಕಿರುಕುಳಕ್ಕೆ ಬೇಸತ್ತು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಲ್ಲದೇ ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿದ್ದು, ನನ್ನ ಈ ನಿರ್ಧಾರಕ್ಕೆ ಸಾಲಗಾರರ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ. ಈ ಘಟನೆ ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ವಿಜಯಪುರ ನಗರದ ಆದರ್ಶ ನಗರ ಬಡಾವಣೆಯ ನಿವಾಸಿಯಾಗಿರುವ ಶೋಬಿತ ಬಳ್ಳೂಳಗಿಡದ (24) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಈತ, ಬಡ್ಡಿ ರೂಪದಲ್ಲಿ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಮಾಡಿಕೊಂಡಿದ್ದ.
ಸಾಲ ಹೆಚ್ಚಾಗಿ ಮಾಡಿಕೊಂಡ ಕಾರಣ ಯುವಕನ ತಂದೆಗೂ ಸಾಲ ಪಾವತಿಸುವಂತೆ ಸಾಲಗಾರರು ನಿತ್ಯ ಕಿರುಕುಳ ಕೊಡುತ್ತಿದ್ದರು. ಈ ಕಿರುಕುಳದ ಬಗ್ಗೆ ಆದರ್ಶ ನಗರ ಪೊಲೀಸರಿಗೆ ಯುವಕ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಸಾಲಗಾರರ ಕಿರುಕುಳದ ಬಗ್ಗೆ ವಿಡಿಯೋ ಮಾಡಿ ಬಳಿಕ ಯುವಕ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಯುವಕ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ.
ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.