ಮಾಡಿದ ಕಾರ್ಯಗಳು ಎಂದಿಗೂ ಶಾಶ್ವತ: ರಂಭಾಪುರಿ ಶ್ರೀ

0
Spread the love

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಬಹು ಜನ್ಮಗಳ ಪುಣ್ಯದ ಫಲ ಈ ಮಾನವ ಜನ್ಮ. ಹುಟ್ಟು ಎಷ್ಟು ಸಹಜವೋ, ಮೃತ್ಯು ಕೂಡ ಅಷ್ಟೇ ನಿಶ್ಚಿತ. ಹುಟ್ಟು-ಸಾವುಗಳ ಮಧ್ಯದ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕಾದುದು ಅವರವರ ಜವಾಬ್ದಾರಿ. ಕಾಯ ಕಣ್ಮರೆಯಾದರೂ ಮಾಡಿದ ಕಾರ್ಯಗಳು ಯಾವಾಗಲೂ ಶಾಶ್ವತವಾಗಿ ಉಳಿಯುತ್ತವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಬುಧವಾರ ತೆಗ್ಗಿನಮಠ ಸಂಸ್ಥಾನದ ಲಿಂ.ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರ 11ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ತೆಗ್ಗಿನಮಠ ಸಂಸ್ಥಾನದ ಇಂದಿನ ಪಟ್ಟಾಧ್ಯಕ್ಷರಾದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳವರ ಪಟ್ಟಾಧಿಕಾರದ ದಶಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ದೇಹವಿದು ದೇವನಿರುವ ದೇಗುಲ. ಸತ್ಯ ಮತ್ತು ಶಾಂತಿಗಳಂತಹ ದೈವೀ ಗುಣಗಳ ಹಣ್ಣು-ಹಂಪಲಗಳನ್ನು ಬೆಳೆಯಬೇಕು. ಅಸುರಿ ಗುಣಗಳ ಕಸ-ಕಡ್ಡಿ ಕಿತ್ತು ಹಾಕಿ ಮುಳ್ಳು-ಕಲ್ಲುಗಳನ್ನು ಸ್ವಚ್ಛಗೊಳಿಸಿ ಶಿವಜ್ಞಾನದ ಬೀಜ ಬಿತ್ತುವಾತನೇ ನಿಜವಾದ ಗುರು. ಬಾಳಿನ ಉನ್ನತಿ-ಅವನತಿಗೆ ಮನುಷ್ಯನ ಮನಸ್ಸು ಮೂಲ. ಸುಖ ಬಯಸುವುದು ಮನುಷ್ಯನ ಸಹಜ ಗುಣ. ಆದರೆ ಸುಖದ ಪ್ರಾಪ್ತಿಗಾಗಿ ಆಚರಿಸ ಬೇಕಾದ ಧರ್ಮಾಚರಣೆಯನ್ನು ಮನುಷ್ಯ ಮಾಡುವುದಿಲ್ಲ.

ಲಿಂ.ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರ ಜೀವನದ ಸಿದ್ಧಿ ಸಾಧನೆಗಳು ಸಾಧಕರ ಬಾಳಿಗೆ ಬೆಳಕು ತೋರಿ ಮುನ್ನಡೆಸುತ್ತವೆ ಎಂದರು.

ನೇತೃತ್ವ ವಹಿಸಿದ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಹೊನ್ನು, ಹೆಣ್ಣು, ಮಣ್ಣಿಗಾಗಿ ಮಡಿದವರು ಕೋಟಿ ಕೋಟಿ ಜನ. ಆದರೆ ಭಗವಂತನಿಗಾಗಿ ಸತ್ತವರನ್ನು ಕಾಣಲಾಗದು. ಮಹಾನುಭಾವರಿಗೆ ಸತ್ಯವೇ ಸಂಪತ್ತು. ಧರ್ಮವೇ ಅವರ ಉಸಿರು. ಭೌತಿಕ ಸಂಪತ್ತಿಗಾಗಿ ಹೋರಾಡಿದವರು ಕಾಲಗರ್ಭದಲ್ಲಿ ಬೆರೆತು ಹೋದರು. ಜಗದ ಜನತೆಗೆ ಬೆಳಕು ತೋರುವ ಜೀವನ ಸಾಗಿಸಿದ ಮಹಾತ್ಮರ, ಋಷಿಮುನಿಗಳ ಮತ್ತು ಸಂತ ಮಹಂತರ ಮಾತುಗಳನ್ನು ಯಾರೂ ಮರೆಯುವಂತಿಲ್ಲ.

ಲಿಂ.ಚಂದ್ರಮೌಳೀಶ್ವರ ಶ್ರೀಗಳವರ ಸಾಧನೆ ಬೋಧನೆ ವೀರಶೈವ ಸಮಾಜಕ್ಕೆ ಮತ್ತು ಧರ್ಮ ಪೀಠಗಳಿಗೆ ಅಮೂಲ್ಯ ಕೊಡುಗೆ ಕೊಟ್ಟಿದ್ದನ್ನು ಮರೆಯಲಾಗದೆಂದರು.

ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು ವೀರಶೈವ ಧರ್ಮ ಮತ್ತು ಗುರು ಪರಂಪರೆ ಕುರಿತು ಉಪದೇಶಾಮೃತವನ್ನಿತ್ತರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು.

ಡಾ. ಟಿ.ಎಂ. ಚಂದ್ರಶೇಖರಯ್ಯ, ಆನಂದಸ್ವಾಮಿ ಗಡ್ಡದ್ದೇವರಮಠ, ಟಿ.ಎಂ. ಶಿವದೇವಸ್ವಾಮಿ, ಉತ್ತಮಚಂದ ಜೈನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪಾರ್ವತಿ ಶಾಬಾದಿಮಠ, ಪಿ. ಮಂಜುನಾಥ ವಿಶೇಷ ಆಹ್ವಾನಿತರಾಗಿದ್ದರು. ಹೆಚ್.ಎಂ. ಕೊಟ್ರಯ್ಯ, ಟಿ.ಎಂ. ವಿಶ್ವನಾಥ, ಪಿ.ಬಿ. ಗೌಡ್ರು, ಟಿ.ಎಂ. ಪ್ರತೀಕ, ಕೆ. ಹನುಮಂತಪ್ಪ ಮೊದಲಾದವರಿಗೆ ಗುರುರಕ್ಷೆ ಜರುಗಿತು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಹರಪನಹಳ್ಳಿ ಮಡಿವಾಳಸ್ವಾಮಿ ಇವರಿಂದ ಸ್ವಾಗತ ಜರುಗಿತು. ಸಿ.ಎಂ. ಕೊಟ್ರಯ್ಯ ನಿರೂಪಿಸಿದರು.

ಸಮಾರಂಭ ಉದ್ಘಾಟಿಸಿದ ಹರಪನಹಳ್ಳಿ ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ ಮಾತನಾಡಿ, ಸುಖಮಯ ಜೀವನಕ್ಕೆ ಧರ್ಮಾಚರಣೆ ಬಹಳ ಮುಖ್ಯ. ಅಂತರಾಂಗದ ಬೆಳಕಿಗಿಂತ ಬಹಿರಂಗದ ಬೆಳಕು ಹೆಚ್ಚೆಂದು ಮನುಷ್ಯ ತಿಳಿದಿರುತ್ತಾನೆ.

ಗುರಿಯಿಲ್ಲದ ಮತ್ತು ಗುರು ಇಲ್ಲದ ಜೀವನ ಬೆಳೆಯಲಾರದು. ಲಿಂ.ಚಂದ್ರಮೌಳೀಶ್ವರ ಶ್ರೀಗಳವರು ಶ್ರಮಪಟ್ಟು ಶಿಕ್ಷಣ ಕೇಂದ್ರ ಹುಟ್ಟು ಹಾಕಿ ಬೆಳೆಸಿದ್ದು ಅವರಲ್ಲಿರುವ ಸಾಮಾಜಿಕ ಕಾಳಜಿಯನ್ನು ಕಾಣಬಹುದಾಗಿದೆ. ಹಿರಿಯರ ಆದರ್ಶ ದಾರಿಯಲ್ಲಿ ವರಸದ್ಯೋಜಾತ ಶ್ರೀಗಳವರು ಸದಾ ಶ್ರಮಿಸುತ್ತಿರುವುದು ಸಂತೋಷವನ್ನುಂಟುಮಾಡುತ್ತದೆ ಎಂದರು.


Spread the love

LEAVE A REPLY

Please enter your comment!
Please enter your name here